ಬೆಂಗಳೂರು, ಸಚಿವ ಬಿ.ನಾಗೇಂದ್ರ ರಾಜೀನಾಮೆಗಾಗಿ ಹೋರಾಟ ಮುಂದುವರಿಸಲಿದ್ದು, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸದನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಬಿ.ನಾಗೇಂದ್ರ ಅವರು ಬಹಳ ಅಮಾಯಕರು, ಪ್ರಾಮಾಣಿಕರು ಹಾಗೂ ಅವರ ವಿರುದ್ಧ ಯಾವುದೇ ಆರೋಪ ಇಲ್ಲ ಎಂದು ಈ ಸರ್ಕಾರ ಸಮರ್ಥನೆ ಮಾಡಿಕೊಳ್ಳುತ್ತಿದೆ. 187 ಕೋಟಿ ರೂ. ಹಗರಣ ನಡೆಸಿರುವುದಕ್ಕೆ ಸೂಕ್ತ ದಾಖಲೆಗಳನ್ನು ನಾನೇ ನೀಡಿದ್ದೇನೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಪಿ.ಚಂದ್ರಶೇಖರನ್ ಸಚಿವರ ಆದೇಶದ ಮೇರೆಗೆ ನಾನು ಹಣ ವರ್ಗಾವಣೆ ಮಾಡಿದ್ದೇನೆ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದರು. 40 ಕೋಟಿ ರೂ. ವರ್ಗಾವಣೆ ಮಾಡಿರುವ ಬಗ್ಗೆ ದಾಖಲೆಗಳಿವೆ. ವಾಲ್ಮೀಕಿ ನಿಗಮದಲ್ಲಿ 50 ಕೋಟಿ ರೂ. ಹಣ ಠೇವಣಿ ಇಟ್ಟು, ಪ್ರತ್ಯೇಕವಾಗಿ ಸಾಲ ಪಡೆಯಲಾಗಿದೆ. ಕಳ್ಳತನ ಮಾಡಲು ಹೊಸ ಸ್ಕೀಮ್ಗಳನ್ನು ಮಾಡಿ, ತೆಲಂಗಾಣಕ್ಕೆ ಹಣ ಕಳಿಸಿರುವ ದಾಖಲೆಗಳನ್ನು ಬಹಿರಂಗ ಮಾಡಿದ್ದೇನೆ ಎಂದರು.
ಒಬ್ಬ ಸಚಿವನಿಗಾಗಿ ಇಡೀ ಸದನವನ್ನು ಹಾಳು ಮಾಡಿ, ಬರಗಾಲ, ನೈಸ್ ಮೊದಲಾದ ಚರ್ಚೆ ನಡೆಸುವುದನ್ನು ತಪ್ಪಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರು ಶಾಮೀಲಾಗಿರುವುದರಿಂದಲೇ ಅವರ ರಾಜೀನಾಮೆ ಪಡೆಯುತ್ತಿಲ್ಲ. 187 ಕೋಟಿ ರೂ. ದಲಿತರಿಗೆ ಸೇರಬೇಕೆಂದು ನಮ್ಮ ಉದ್ದೇಶ, ಇದನ್ನು ಮುಚ್ಚಿಹಾಕಬೇಕೆಂಬುದು ಕಾಂಗ್ರೆಸ್ನ ಉದ್ದೇಶ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಇನ್ನಷ್ಟು ಹೋರಾಟ ಮಾಡಲಿದ್ದೇವೆ. ಆ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರೊಂದಿಗೂ ಚರ್ಚಿಸುತ್ತೇನೆ ಎಂದರು.







