ರಾಮನಗರ: ನೈಸ್ ರಸ್ತೆ ಟೋಲ್ ವಿಚಾರವಾಗಿ ರಾಜಕೀಯ ಕಣದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ಶೀತಲ ಸಮರ ಈಗ ಬಹಿರಂಗ ವಾಕ್ಸಮರವಾಗಿ ಬದಲಾಗಿದ್ದು, ಇತಿಹಾಸದ ಪುಟಗಳನ್ನು ಕೆದಕುವ ಹಂತಕ್ಕೆ ತಲುಪಿದೆ. ರಾಮನಗರದ ಅಕ್ಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಡಿ.ಕೆ. ಸಹೋದರರ ವಿರುದ್ಧ ಅತ್ಯಂತ ತೀಕ್ಷ್ಣವಾದ ಶಬ್ದಪ್ರಯೋಗ ಮಾಡಿದ್ದಾರೆ.
ನೀವು ಕೋತ್ವಾಲನ ಶಿಷ್ಯರು ಎಂಬ ಇತಿಹಾಸ ಮರೆಯಬೇಡಿ
ಡಿ.ಕೆ. ಸುರೇಶ್ ಅವರ ಟೀಕೆಗಳಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಭೂಗತ ಲೋಕದ ಮಾಜಿ ಡಾನ್ ಕೋತ್ವಾಲ ರಾಮಚಂದ್ರನ ಹೆಸರನ್ನು ಎಳೆದು ತಂದಿದ್ದಾರೆ. ರಾಮನಗರಕ್ಕೆ ನಾವು ಕಾಲಿಟ್ಟಾಗ ಕನಕಪುರ ಹೇಗಿತ್ತು ಮತ್ತು ಅದಕ್ಕೆ ಕನೆಕ್ಷನ್ ಕೊಟ್ಟವರು ಯಾರು ಎಂಬುದು ಎಲ್ಲರಿಗೂ ಗೊತ್ತು. ಅಂದು ಕೋತ್ವಾಲನಿಗೆ ಹೆಂಡ ಕುಡಿಸುತ್ತಾ ಕುಳಿತಿದ್ದವರು ಇಂದು ನಮಗೆ ಸಂಸ್ಕೃತಿಯ ಪಾಠ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ನಿಮ್ಮ ಪಾಪದ ಕೊಳೆಯನ್ನು ತೊಳೆಯುವ ಕೆಲಸವನ್ನು ನಾವು ಹಂತ ಹಂತವಾಗಿ ಮಾಡುತ್ತಿದ್ದೇವೆ ಎಂದು ಅವರು ನೇರವಾಗಿ ಗುಡುಗಿದರು.
ನಮ್ಮದು ಪೂಜಿಸುವ ಬೃಂದಾವನ, ಲೂಟಿ ಮಾಡುವ ಬೃಂದಾವನವಲ್ಲ
ಇದಕ್ಕೂ ಮುನ್ನ ಡಿ.ಕೆ. ಸುರೇಶ್ ಅವರು ಕುಮಾರಸ್ವಾಮಿ ಅವರ ನಡೆಯನ್ನು ಮಾಡುವುದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ ಎಂದು ವ್ಯಂಗ್ಯವಾಡಿದ್ದರು. ಈ ಮಾತಿಗೆ ತಿರುಗೇಟು ನೀಡಿದ ಹೆಚ್‌ಡಿಕೆ, ನಾವು ನಂಬಿರುವ ಬೃಂದಾವನ ಸಂಸ್ಕೃತಿಯ ಸಂಕೇತ. ನಾವು ಬೃಂದಾವನ ಕಟ್ಟಿ ಕೈಮುಗಿದು ಪೂಜೆ ಮಾಡುವವರು. ಆದರೆ ನಿಮ್ಮದು ರೈತರ ಜಮೀನು ಲಪಟಾಯಿಸಲು ಸೂಟ್‌ಕೇಸ್ ಹಿಡಿದು ಓಡಾಡುವ ಬೃಂದಾವನ. ಪ್ರತಿದಿನ ಸೂಟ್‌ಕೇಸ್ ಹಿಡಿದು ಎಲ್ಲೆಲ್ಲಿ ಜಮೀನು ಸಿಗುತ್ತದೆಯೋ ಅಲ್ಲೆಲ್ಲಾ ಲೂಟಿ ಮಾಡುವ ಕಾಯಕ ನಮ್ಮದಲ್ಲ ಎಂದು ಭೂಹಗರಣದ ಆರೋಪಗಳನ್ನು ಎತ್ತಿ ತೋರಿಸಿದರು.
ರೈತರ ಪರ ಹೋರಾಟವೇ ಹೊರತು ಜನರನ್ನು ಎತ್ತಿಕಟ್ಟುತ್ತಿಲ್ಲ
ನೈಸ್ ರಸ್ತೆ ಟೋಲ್ ವಿಚಾರದಲ್ಲಿ ಜನರನ್ನು ಕುಮಾರಸ್ವಾಮಿ ಎತ್ತಿಕಟ್ಟುತ್ತಿದ್ದಾರೆ ಎಂಬ ಡಿ.ಕೆ. ಸುರೇಶ್ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಚಿವರು, ಕಳೆದ 20 ವರ್ಷಗಳಿಂದ ರೈತರು ತಮ್ಮ ಭೂಮಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅವರಿಗೆ ಇನ್ನೂ ಒಂದು ರೂಪಾಯಿ ಪರಿಹಾರ ಧನ ಸಿಕ್ಕಿಲ್ಲ. ಅನ್ಯಾಯಕ್ಕೊಳಗಾದ ರೈತರ ಪರವಾಗಿ ಧ್ವನಿ ಎತ್ತುವುದು ಜನರನ್ನು ಎತ್ತಿಕಟ್ಟುವುದಲ್ಲ. ವಿರೋಧಿಗಳಿಗೆ ಕೇವಲ ಟೇಪ್ ಹಿಡಿದು ಜಮೀನು ಅಳೆಯುವುದು ಮತ್ತು ಲೆಕ್ಕಾಚಾರ ಮಾಡುವುದು ಮಾತ್ರ ಗೊತ್ತು. ಆದರೆ ನಮಗೆ ಜನರ ನೋವು ಅರ್ಥವಾಗುತ್ತದೆ. ನೈಸ್ ರಸ್ತೆಯ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಲಿಗೆಳೆಯುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾಮನಗರದ ನೆಲದಲ್ಲಿ ಈಗ ಹಳೆ ಮೈಸೂರು ಭಾಗದ ಇಬ್ಬರು ಪ್ರಭಾವಿ ರಾಜಕೀಯ ಶಕ್ತಿಗಳ ನಡುವಿನ ಹೋರಾಟ ವೈಯಕ್ತಿಕ ಟೀಕೆಗಳ ಹಂತಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಈ ಕಿಚ್ಚು ಇನ್ನು ಎಷ್ಟು ಜೋರಾಗಲಿದೆ ಎಂಬ ಕುತೂಹಲ ಮೂಡಿಸಿದೆ.








