ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನೈಸ್ ರಸ್ತೆ ಅಕ್ರಮದ ವಿಚಾರ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳ ವಿರುದ್ಧ ಅತ್ಯಂತ ಗಂಭೀರ ಮತ್ತು ಸ್ಪೋಟಕ ಆರೋಪಗಳನ್ನು ಮಾಡಿದ್ದಾರೆ. ರಾಜ್ಯದ ಈಗಿನ ಮುಖ್ಯಮಂತ್ರಿಗಳೇ ಬೇನಾಮಿ ಕಂಪನಿಗಳ ಮೂಲಕ ನೈಸ್ ಕಂಪನಿಯನ್ನು ಟೇಕ್ ಓವರ್ (ಖರೀದಿ) ಮಾಡಲು ಹೊರಟಿದ್ದಾರೆ ಎಂಬ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ.
ಬೇನಾಮಿ ಕಂಪನಿಗಳ ಮೂಲಕ ಭೂ ಲೂಟಿ
ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ನೈಸ್ ಅಕ್ರಮಗಳಲ್ಲಿ ಮುಖ್ಯಮಂತ್ರಿಗಳು ನೇರವಾಗಿ ಶಾಮೀಲಾಗಿದ್ದಾರೆ. ಇಡೀ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಭೂ ಲೂಟಿಯ ಮಹಾನಾಯಕ ಈ ಮುಖ್ಯಮಂತ್ರಿ ಎಂದು ವಾಗ್ದಾಳಿ ನಡೆಸಿದರು. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತು ನೇರ ವ್ಯವಹಾರಗಳು ನಡೆಯುತ್ತಿವೆ. ತಾಕತ್ತಿದ್ದರೆ ಈ ನೈಸ್ ಕಂಪನಿಯನ್ನು ಯಾರು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಮುಖ್ಯಮಂತ್ರಿಗಳು ಜನರ ಮುಂದೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ನೈಸ್ ಯೋಜನೆಯ ಉಲ್ಲಂಘನೆ ಮತ್ತು ಟೋಲ್ ಸುಲಿಗೆ
ನೈಸ್ ಯೋಜನೆ ಕೇವಲ ಒಂದು ರಸ್ತೆ ಯೋಜನೆಯಲ್ಲ, ಇದು ಸ್ಕೀಮ್ ಫಾರ್ ಸ್ಕ್ಯಾಮ್ ಆಗಿದೆ ಎಂದು ಅವರು ಬಣ್ಣಿಸಿದರು. 111 ಕಿಲೋಮೀಟರ್ ರಸ್ತೆ ನಿರ್ಮಿಸಬೇಕಿದ್ದ ಕಂಪನಿ ಕೇವಲ 5 ಕಿಲೋಮೀಟರ್ ರಸ್ತೆ ನಿರ್ಮಿಸಿ ಸುಮ್ಮನಾಗಿದೆ. ರೈತರಿಗೆ ಪರಿಹಾರ ನೀಡದೆ ಅವರ ಭೂಮಿಯನ್ನು ಮನಸೋಇಚ್ಛೆ ಮಾರಾಟ ಮಾಡಿಕೊಳ್ಳಲಾಗಿದೆ. ಆದರೂ ಸರ್ಕಾರ ಮೌನಕ್ಕೆ ಶರಣಾಗಿದ್ದು, ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಂದ ಅಕ್ರಮವಾಗಿ ಹಣ ಸುಲಿಗೆ ಮಾಡಲಾಗುತ್ತಿದೆ. ಈ ಸುಲಿಗೆಯ ಹಣದಲ್ಲಿ ಸರ್ಕಾರದ ದೊಡ್ಡ ಪಾಲಿದೆ ಎಂದು ಅವರು ದೂರಿದರು.
ಯುವಜನತೆಗೆ ಹೋರಾಟದ ಕರೆ
ಈ ಬೃಹತ್ ಹಗರಣದ ವಿರುದ್ಧ ಇಡೀ ರಾಜ್ಯವೇ ತಿರುಗಿ ಬೀಳಬೇಕು. ಯುವಕರು ಮತ್ತು ವಿದ್ಯಾರ್ಥಿಗಳು ಬೀದಿಗಿಳಿದು ಜಾಗೃತಿ ಮೂಡಿಸಬೇಕು. ಯಾರೂ ಕೂಡ ಟೋಲ್ ಕಟ್ಟದಂತೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಚಿವರು ಕರೆ ನೀಡಿದರು. ನಮ್ಮ ಹೋರಾಟ ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಆದರ್ಶದಂತೆ ಶಾಂತಿಯುತವಾಗಿರಲಿ. ಆದರೆ ಅಕ್ರಮವನ್ನು ಪ್ರಶ್ನಿಸುವ ಧೈರ್ಯ ನಮ್ಮದಾಗಿರಲಿ ಎಂದು ಅವರು ಕಿವಿಮಾತು ಹೇಳಿದರು.
ಬೆಂಗಳೂರಿನ ಉದ್ಯಾನವನಗಳ ಮೇಲೂ ಸರ್ಕಾರದ ಕಣ್ಣು
ಕೇವಲ ನೈಸ್ ಮಾತ್ರವಲ್ಲದೆ, ಬೆಂಗಳೂರಿನ ಉದ್ಯಾನವನಗಳು ಮತ್ತು ಆಟದ ಮೈದಾನಗಳನ್ನು ನುಂಗಲು ಸರ್ಕಾರ ಸಂಚು ರೂಪಿಸಿದೆ. ಪಾರ್ಕ್ಗಳ ಶೇಕಡಾ 5 ರಷ್ಟು ಜಾಗವನ್ನು ಸಾರ್ವಜನಿಕ ಉದ್ದೇಶದ ನೆಪದಲ್ಲಿ ಲೂಟಿ ಮಾಡಲು ಬಿಲ್ ಪಾಸ್ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಮನೆಯ ಮುಂದೆ ಕಾರು ನಿಲ್ಲಿಸಿದರೂ ವರ್ಷಕ್ಕೆ 25,000 ರೂಪಾಯಿ ತೆರಿಗೆ ವಿಧಿಸಲು ಹೊರಟಿರುವುದು ದಿವಾಳಿಯಾಗಿರುವ ಸರ್ಕಾರದ ಲಕ್ಷಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ನಿವೃತ್ತಿಯ ಸವಾಲು
ಕುಮಾರಸ್ವಾಮಿ ಅವರು ಬೇನಾಮಿ ಆಸ್ತಿ ಹೊಂದಿದ್ದಾರೆ ಎಂಬ ಟೀಕೆಗಳಿಗೆ ಉತ್ತರಿಸಿದ ಸಚಿವರು, ನನ್ನ ಬೇನಾಮಿ ಆಸ್ತಿ ಯಾವುದಾದರೂ ಇದ್ದರೆ ಈ ಸರ್ಕಾರ ತೋರಿಸಲಿ. ಅಂತಹ ಒಂದೇ ಒಂದು ಆಸ್ತಿ ಇದೆ ಎಂದು ಸಾಬೀತುಪಡಿಸಿದರೆ ನಾನು ಇಂದೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ನೇರ ಸವಾಲು ಎಸೆದರು. ಮುಂದಿನ ವಾರ ನೈಸ್ ಅಕ್ರಮಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಜನರ ಮುಂದೆ ಇಡುವುದಾಗಿ ಅವರು ಘೋಷಿಸಿದರು.








