ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಇಂದು, ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ವಿಶೇಷ ದಿನದ ಮುನ್ನ ಯಶ್ ಅವರು ತಾವು ಅಪಾರವಾಗಿ ನಂಬುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯಶ್, ಅಲ್ಲಿಂದ ಕಾರಿನಲ್ಲಿ ಧರ್ಮಸ್ಥಳಕ್ಕೆ ತೆರಳಿದರು. ‘ಟಾಕ್ಸಿಕ್’ ಸಿನಿಮಾ ಯಶಸ್ಸಿಗಾಗಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪುನಸ್ಕಾರಗಳನ್ನು ನೆರವೇರಿಸಿದರು ಎಂದು ತಿಳಿದುಬಂದಿದೆ.
ಯಶ್‌ಗೆ ಅದ್ಧೂರಿ ಸ್ವಾಗತ
ಯಶ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಅಭಿಮಾನಿ ಸಂಘಗಳ ಸದಸ್ಯರು ಅವರಿಗೆ ಭರ್ಜರಿ ಸ್ವಾಗತ ನೀಡಿದರು. ಯಶ್ ಅವರ ಧರ್ಮಸ್ಥಳ ಭೇಟಿಯ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ‘ಟಾಕ್ಸಿಕ್’ ಚಿತ್ರದ ಕೆಲಸಗಳು ಆರಂಭವಾಗುವ ಮೊದಲು ಯಶ್ ಅವರು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು.ಆ ಸಂದರ್ಭದಲ್ಲಿ ತಮ್ಮ ಧರ್ಮಸ್ಥಳದ ನಂಬಿಕೆಯ ಕುರಿತು ಮಾತನಾಡಿದ್ದ ಯಶ್, ತಮ್ಮ ತಂದೆ ಸದಾ “ಧರ್ಮಸ್ಥಳದ ಮಂಜುನಾಥ ಸ್ವಾಮಿಯನ್ನು ಬೇಡಿಕೊಂಡರೆ ಎಲ್ಲವೂ ಒಳಿತಾಗುತ್ತದೆ” ಎಂದು ಹೇಳುತ್ತಿದ್ದರು ಎಂದು ನೆನಪಿಸಿಕೊಂಡಿದ್ದರು.
ನನಗೆ ಇರುವ ಒಂದೇ ನಂಬಿಕೆ ಎಂದರೆ ಮಂಜುನಾಥ ಸ್ವಾಮಿ ಕೈಬಿಡುವುದಿಲ್ಲ ಎಂಬ ಭಾವನೆಯನ್ನು ಯಶ್ ಈ ಹಿಂದೆ ಹಂಚಿಕೊಂಡಿದ್ದರು.
ಈ ಬಾರಿ ‘ಟಾಕ್ಸಿಕ್’ ಬಿಡುಗಡೆ ದಿನದ ಮೊದಲು ಧರ್ಮಸ್ಥಳಕ್ಕೆ ಭೇಟಿ ನೀಡಿರುವುದು ಅವರ ಭಕ್ತಿ ಮತ್ತು ನಂಬಿಕೆಗೆ ಮತ್ತೊಂದು ಸಾಕ್ಷಿ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.








