ಮೈಸೂರು : ಕೊರೊನಾ ವೈರಸ್ ಆತಂಕದ ಹಿನ್ನೆಲೆ ಮೈಸೂರು ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಗೊಳಿಸುವಂತೆ ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಮತ್ತೊಮ್ಮೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಾ.ರಾ ಮಹೇಶ್, ಕೋವಿಡ್-19 ಮಹಾಮಾರಿ ದಿನದಿಂದ ದಿನಕ್ಕೆ ಮೈಸೂರು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ವೈದ್ಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಆತಂಕಕಾರಿ ವಿಚಾರ. ಇದು ಸೋಂಕು ಸಮುದಾಯದಲ್ಲಿ ಹರಡುವಿಕೆಯ ಸೂಚನೆಯಾಗಿದೆ. ಆದ್ದರಿಂದ ದಯಮಾಡಿ ಆದಷ್ಟು ಬೇಗ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪತ್ರವನ್ನು ಟ್ಯಾಗ್ ಮಾಡಿದ್ದಾರೆ.
ಇದಲ್ಲದೆ ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲೆಯ ವ್ಯಾಪ್ತಿಯ ಕಂದಾಯ ಮನ್ನಾ ಮಾಡುವಂತೆ ಸಿಎಂಗೆ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಸೇಖರ್ ಅವರಿಗೆ ಪತ್ರದ ಮೂಲಕ ಶಾಸಕ ಮಹೇಶ್ ಮನವಿ ಮಾಡಿದ್ದಾರೆ.








