ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, KPSC ನೇಮಕಾತಿ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸವೇ ಇಲ್ಲದಂತಾಗಿದೆ ಎಂದು ಆರೋಪಿಸಿದರು.ನೇಮಕಾತಿ ಮಾಡುವಾಗಲೇ ರೇಟ್ ಫಿಕ್ಸ್ ಆಗಿದೆ ಎಂಬ ಆರೋಪಗಳಿವೆ. KPSC ಹಗರಣದಿಂದ ವ್ಯವಸ್ಥೆಯ ಮೇಲಿನ ಜನರ ನಂಬಿಕೆ ಕುಸಿದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
‘ಜಾತಿ ಹೆಸರಿನಲ್ಲಿ ದುಡ್ಡು ಪಡೆದು KPSC ಹಾಳಾಗಿದೆ’
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ HDK, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲದರಲ್ಲೂ ಅವರ ಕೃಪಾಪೋಷಿತ ವ್ಯವಸ್ಥೆ ಇದೆ ಎಂದು ಆರೋಪಿಸಿದರು.ಜಾತಿಯ ಹೆಸರಿನಲ್ಲಿ ಹಣ ಪಡೆದು KPSC ವ್ಯವಸ್ಥೆಯನ್ನು ಹಾಳು ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದರು.
‘ಗೃಹ ಸಚಿವರಾಗಿದ್ದಾಗ ಗೊತ್ತಿರಲಿಲ್ಲವೇ?’
ED ದಾಳಿ ನಡೆದ ಸಂದರ್ಭದಲ್ಲಿ IAS ಅಧಿಕಾರಿಯೊಬ್ಬರು ನಾಪತ್ತೆಯಾಗಿದ್ದರು ಎಂದು ಹೇಳಿದ ಕುಮಾರಸ್ವಾಮಿ, ಈ ವಿಚಾರದ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುವುದಾದರೆ, ನೀವು ಗೃಹ ಸಚಿವರಾಗಿದ್ದಾಗ ಏನು ಮಾಡುತ್ತಿದ್ದಿರಿ? ಎಂದು ಪ್ರಶ್ನಿಸಿದರು.
KPSC ನೇಮಕಾತಿ ಹಾಗೂ ಸಂಬಂಧಿತ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ HD ಕುಮಾರಸ್ವಾಮಿ, ಸರ್ಕಾರದ ವಿರುದ್ಧ ತಮ್ಮ ಆರೋಪಗಳನ್ನು ಮುಂದುವರಿಸಿದ್ದಾರೆ.







