ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ವಾಲ್ಮೀಕಿ ನಿಗಮದ ಹಣ ದುರುಪಯೋಗ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯ ಬೆನ್ನಲ್ಲೇ ಬಿಜೆಪಿ ನಾಯಕ ಸಿ.ಟಿ. ರವಿ ಅವರು ನೀಡಿರುವ ಹೇಳಿಕೆ ಈಗ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಾಲ್ಮೀಕಿ ನಿಗಮದ ನೂರಾರು ಕೋಟಿ ರೂಪಾಯಿ ಹಣ ಕೇವಲ ಅಕ್ರಮವಾಗಿ ವರ್ಗಾವಣೆಯಾಗಿಲ್ಲ, ಬದಲಾಗಿ ಅದು ಸಚಿವರ ಆಪ್ತ ಸಂಬಂಧಗಳ ಖಾತೆಗಳಿಗೂ ಹರಿದಿದೆ ಎಂದು ರವಿ ಬಾಂಬ್ ಸಿಡಿಸಿದ್ದಾರೆ.
ಕಟ್ಕೊಂಡೋರು ಮತ್ತು ಇಟ್ಕೊಂಡೋರ ಖಾತೆಗೆ ಹಣ ವರ್ಗಾವಣೆ
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯಲ್ಲಿ ಹೊರಬರುತ್ತಿರುವ ಮಾಹಿತಿಗಳನ್ನು ಉಲ್ಲೇಖಿಸಿ ಗಂಭೀರ ಆರೋಪ ಮಾಡಿದರು. ವಾಲ್ಮೀಕಿ ನಿಗಮದ ಲೂಟಿಯಾದ ಹಣ ಕಟ್ಕೊಂಡವರ ಖಾತೆಗೂ ಹೋಗಿದೆ, ಹಾಗೆಯೇ ಇಟ್ಕೊಂಡವರ ಖಾತೆಗೂ ಹೋಗಿದೆ. ಆದರೆ ಯಾರು ಯಾರನ್ನು ಇಟ್ಕೊಂಡಿದ್ದಾರೆ ಎಂದು ನನ್ನನ್ನು ಕೇಳಬೇಡಿ. ಈ ವಿಚಾರ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಲಿದೆ ಎಂದು ವ್ಯಂಗ್ಯವಾಡಿದರು. 187 ಕೋಟಿ ರೂಪಾಯಿ ಹಗರಣದಲ್ಲಿ ಹಣದ ಹರಿವು ಎಲ್ಲೆಲ್ಲಿಗೆ ಹೋಗಿದೆ ಎಂಬುದು ಇಡಿ ತನಿಖೆಯಿಂದ ಸಂಪೂರ್ಣವಾಗಿ ಬಯಲಾಗಲಿದೆ ಎಂದರು.
ಎಸ್‌ಐಟಿ ತನಿಖೆ ಕೇವಲ ತಿಪ್ಪೆ ಸಾರಿಸುವ ಕೆಲಸ
ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಮೇಲೆ ನಂಬಿಕೆ ಇಲ್ಲದ ಸಿ.ಟಿ. ರವಿ, ಎಸ್‌ಐಟಿ ಕೇವಲ ಪ್ರಕರಣವನ್ನು ಮುಚ್ಚಿ ಹಾಕುವ ಅಥವಾ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಸಿಐಡಿ ಹಾದಿಯಲ್ಲೇ ಎಸ್‌ಐಟಿ ಸಾಗುತ್ತಿದೆ. ಆದರೆ ಸಿಬಿಐ ಮತ್ತು ಇಡಿ ಸಂಸ್ಥೆಗಳು ಹಾಗಲ್ಲ. ಅವು ಹಗರಣದ ಬೇರುಗಳನ್ನು ಹುಡುಕಿ ತೆಗೆಯುತ್ತವೆ. ಕೊನೆಯವರೆಗೂ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿವೆ. ಇಲ್ಲವಾದರೆ ರಾಜ್ಯದಲ್ಲಿ ಲೂಟಿ ಹೊಡೆಯುವವರಿಗೆ ಸರ್ಕಾರವೇ ಪರವಾನಗಿ ನೀಡಿದಂತಾಗುತ್ತದೆ ಎಂದು ಕಿಡಿಕಾರಿದರು.
ಭ್ರಷ್ಟರ ಪರ ಕಾಂಗ್ರೆಸ್ ವಕಾಲತ್ತು
ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ದೂರಿದ ಅವರು, ಅಧಿಕಾರಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸರ್ಕಾರ ಭ್ರಷ್ಟ ಸಚಿವರನ್ನು ರಕ್ಷಿಸಲು ಮುಂದಾಗಿತ್ತು. ಅಪರಾಧ ಸಾಬೀತಾಗಿಲ್ಲ ಎಂಬ ಕುಂಟು ನೆಪ ಹೇಳಿ ಸಮರ್ಥಿಸಿಕೊಳ್ಳುವುದು ಸರ್ಕಾರದ ಭ್ರಷ್ಟ ನೀತಿಯನ್ನು ತೋರಿಸುತ್ತದೆ. ಬಿ. ನಾಗೇಂದ್ರ ಅವರ ರಾಜೀನಾಮೆ ದೊಡ್ಡ ತ್ಯಾಗವೇನಲ್ಲ. ಲೂಟಿ ಮಾಡಿದ ಮೇಲೆ ರಾಜೀನಾಮೆ ನೀಡಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬುದು ಪ್ರಕೃತಿಯ ನಿಯಮ ಎಂದು ಅವರು ಎಚ್ಚರಿಸಿದರು.
ಬಡ ದಲಿತರ ಪರ ಬಿಜೆಪಿ, ಭ್ರಷ್ಟರ ಪರ ಕಾಂಗ್ರೆಸ್
ಬಿಜೆಪಿ ಯಾವಾಗಲೂ ಬಡ ಮತ್ತು ಪ್ರಾಮಾಣಿಕ ದಲಿತರ ಪರವಾಗಿ ಇರುತ್ತದೆ. ಆದರೆ ಕಾಂಗ್ರೆಸ್ ಭ್ರಷ್ಟ ದಲಿತ ನಾಯಕರ ಪರವಾಗಿ ನಿಂತು ವಕಾಲತ್ತು ವಹಿಸುತ್ತಿದೆ. ಅಮಾಯಕ ಅಧಿಕಾರಿಯ ಸಾವಿಗೆ ಕಾರಣವಾದವರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಆಗ್ರಹ. ಇದಕ್ಕಾಗಿಯೇ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಹಿಂದೆ ಜೈಲು ಶಿಕ್ಷೆ ಅನುಭವಿಸಿ ಬಂದವರನ್ನೇ ಮತ್ತೆ ಮಂತ್ರಿ ಮಾಡಿ ಜನರಿಗೆ ತಪ್ಪು ಸಂದೇಶ ನೀಡಲಾಗಿತ್ತು. ಈಗ ಎಲ್ಲವೂ ಸಾಕ್ಷ್ಯ ಸಮೇತ ಹೊರಬರುತ್ತಿದೆ. ಸಚಿವರ ಮೌಖಿಕ ಸೂಚನೆ ಇಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ಹಣ ವರ್ಗಾವಣೆ ಸಾಧ್ಯವಿಲ್ಲ ಎಂಬುದು ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರ ಡೆತ್ ನೋಟ್‌ನಿಂದಲೇ ಸ್ಪಷ್ಟವಾಗಿದೆ ಎಂದು ಸಿ.ಟಿ. ರವಿ ಗುಡುಗಿದರು.








