ಯಶ್ ನಟನೆಯ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಕುರಿತು ಕೇಳಿಬರುತ್ತಿರುವ ನೆಗೆಟಿವ್ ಕಾಮೆಂಟ್‌ಗಳು ಹಾಗೂ ಟ್ರೋಲ್‌ಗಳಿಗೆ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಹುತೇಕ ಪ್ರೇಕ್ಷಕರು ಸಿನಿಮಾ ಹಾಗೂ ಯಶ್ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಸಿನಿಮಾದ ಬಗ್ಗೆ ನೆಗೆಟಿವ್ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿನಿಮಾ ಚೆನ್ನಾಗಿದೆ, ಆಕ್ಟಿಂಗ್ ಚೆನ್ನಾಗಿದೆ, ಸಿನಿಮಾ ತುಂಬಾ ರಿಚ್ ಆಗಿದೆ ಅಂತ ಜನ ಹೇಳುತ್ತಿದ್ದಾರೆ. ನೂರರಲ್ಲಿ ಒಂದೆರಡು ಜನರಿಗೆ ಇಷ್ಟ ಆಗಿಲ್ಲ. ಎಲ್ಲರ ಅಭಿಪ್ರಾಯವೂ ಒಂದೇ ರೀತಿ ಇರಬೇಕೆಂದೇನಿಲ್ಲ. ಆದರೆ ಬೇಕು ಅಂತಲೇ ಕೆಲವರು ನೆಗೆಟಿವ್ ಮಾಡುತ್ತಿದ್ದಾರೆ. 95% ಜನ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
‘ಕಾಲೆಳೆಯುವವರು ಯಾವತ್ತೂ ಕಾಲೆಳೆಯುತ್ತಲೇ ಇರ್ತಾರೆ’
ಯಶ್ ಅವರ ‘ರಾಜಾಹುಲಿ’ ಸಿನಿಮಾದ ಡೈಲಾಗ್‌ನ್ನು ನೆನಪಿಸಿಕೊಂಡ ಪುಷ್ಪಾ ಅರುಣ್ ಕುಮಾರ್, ಯಶಸ್ಸು ಕಂಡವರನ್ನು ಕಾಲೆಳೆಯುವವರು ಯಾವತ್ತೂ ಇರುತ್ತಾರೆ ಎಂದು ಹೇಳಿದ್ದಾರೆ.ಹೇಳೋರು ಏನು ಬೇಕಾದರೂ ಹೇಳುತ್ತಾರೆ. ಬೇಕಂತಲೇ ನೆಗೆಟಿವ್ ಮಾಡುವವರು ಜಾಸ್ತಿಯಾಗಿದ್ದಾರೆ. ಇದೇನು ಕೌಂಟ್ ಆಗಲ್ಲ ಬಿಡಿ ಅವನಿಗೆ ಎಂದು ಯಶ್ ಪರವಾಗಿ ಮಾತನಾಡಿದ್ದಾರೆ.500 ಕೋಟಿ ರೂಪಾಯಿ ಹೂಡಿಕೆ ಮಾಡಿ ಸಿನಿಮಾ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪ್ರೇಕ್ಷಕರು ಹಾಗೂ ಕನ್ನಡಿಗರು ಸಿನಿಮಾಗಳನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
‘ಕನ್ನಡಿಗರು ಉಳಿಸಿಕೊಳ್ಳಬೇಕು’
ಯಶ್ ಈಗಾಗಲೇ ತಮ್ಮದೇ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಆದರೆ ಕನ್ನಡ ಚಿತ್ರರಂಗವನ್ನು ಬೆಳೆಸಬೇಕಾದರೆ ಕನ್ನಡಿಗರ ಬೆಂಬಲ ಅತ್ಯಗತ್ಯ ಎಂದು ಪುಷ್ಪಾ ಅರುಣ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
500 ಕೋಟಿ ಹಾಕಿ ಸಿನಿಮಾ ಮಾಡಿ, ಜನ ಹೀಗೆ ಮಾಡಿದ್ರೆ ಯಾರು ಸಿನಿಮಾ ಮಾಡ್ತಾರೆ? ಎಂದು ಅವರು ಪ್ರಶ್ನಿಸಿದ್ದಾರೆ.
ಇದೇ ವೇಳೆ ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಹಲವು ಕಲಾವಿದರಿಗೆ ಎದುರಾದ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಇಂಡಸ್ಟ್ರಿಯಲ್ಲಿ ಅಪ್ಪಂದಿರು ಇದ್ದವರನ್ನೇ ಏನೇನು ಮಾಡಿದ್ದಾರೆ. ಹಾಗಿರುವಾಗ ಒಬ್ಬ ಬಸ್ ಡ್ರೈವರ್ ಮಗನನ್ನು ಬಿಡ್ತಾರಾ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಟಾಕ್ಸಿಕ್’ ಕುರಿತು ಪ್ರೇಕ್ಷಕರ ಅಭಿಪ್ರಾಯಗಳು ವಿಭಿನ್ನವಾಗಿರಬಹುದು. ಆದರೆ ಉದ್ದೇಶಪೂರ್ವಕ ಟ್ರೋಲಿಂಗ್‌ಗಿಂತ ಸಿನಿಮಾ ಹಾಗೂ ಕಲಾವಿದರ ಕೆಲಸವನ್ನು ಅದರ ಅರ್ಹತೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು ಎಂಬ ಸಂದೇಶವನ್ನು ಯಶ್ ಅವರ ತಾಯಿ ನೀಡಿದ್ದಾರೆ.








