ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್ ಇನ್ಸ್ಪೆಕ್ಟರ್ ಹುದ್ದೆಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಇದೀಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಈ ಭಾರಿ ಅಕ್ರಮದ ಹಿಂದೆ ಪ್ರೇಮ ವೈಫಲ್ಯದ ಕಥೆಯೊಂದು ಅಡಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.ತನ್ನ ಪ್ರೇಯಸಿ ದೂರವಾಗಿದ್ದಕ್ಕೆ ಆಕ್ರೋಶಗೊಂಡಿದ್ದ ಗೌರವ್ ಪಾಟೀಲ್ ಎಂಬಾತ ಪೊಲೀಸರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದು, ಇದೇ ಪ್ರಕರಣದ ತನಿಖೆಗೆ ಪ್ರಮುಖ ಸುಳಿವಾಗಿದೆ ಎಂದು ವರದಿಯಾಗಿದೆ.
ಪ್ರಶ್ನೆಪತ್ರಿಕೆ ಪ್ರೇಮಿಗೆ ವಾಟ್ಸಾಪ್ನಲ್ಲಿ!
ತನಿಖೆಯ ಪ್ರಕಾರ, ಪರೀಕ್ಷಾರ್ಥಿ ಋತುಜಾ ಪಾಟೀಲ್ ಅವರ ತಂದೆ ಅಮೃತ್ ಪಾಟೀಲ್, ನಂದೂರ್ಬಾರ್ನ ಕೋಚಿಂಗ್ ಸೆಂಟರ್ ಮಾಲೀಕ ಪ್ರವೀಣ್ ಪಾಟೀಲ್ ಎಂಬಾತನಿಗೆ ₹5 ಲಕ್ಷ ನೀಡಿ ಪರೀಕ್ಷೆಗೆ ಎರಡು ದಿನ ಮುಂಚಿತವಾಗಿ, ಅಂದರೆ ಮಾರ್ಚ್ 20ರಂದು ಪ್ರಶ್ನೆಪತ್ರಿಕೆ ಪಡೆದಿದ್ದರು ಎನ್ನಲಾಗಿದೆ.ಈ ಪ್ರಶ್ನೆಪತ್ರಿಕೆಯನ್ನು ಋತುಜಾ ತನ್ನ ಪ್ರೇಮಿ ಗೌರವ್ ಪಾಟೀಲ್ಗೆ ವಾಟ್ಸಾಪ್ ಮೂಲಕ ಹಂಚಿಕೊಂಡಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ.
ಋತುಜಾ ಪಾಸ್, ಗೌರವ್ ಫೇಲ್!
ಮಾರ್ಚ್ 22ರಂದು ನಡೆದ ಪರೀಕ್ಷೆಯಲ್ಲಿ ಋತುಜಾ ಉತ್ತಮ ಅಂಕಗಳೊಂದಿಗೆ ಆಯ್ಕೆಯಾದರೆ, ಗೌರವ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ ಎನ್ನಲಾಗಿದೆ.ನಂತರ ಋತುಜಾ ಕುಟುಂಬದವರು ಇವರ ವಿವಾಹಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಆಕೆ ಗೌರವ್ನಿಂದ ದೂರವಾಗಿದ್ದಳು. ಇದರಿಂದ ಆಕ್ರೋಶಗೊಂಡ ಗೌರವ್, ಪ್ರಶ್ನೆಪತ್ರಿಕೆ ಸೋರಿಕೆಯ ರಹಸ್ಯವನ್ನು ಪೊಲೀಸರಿಗೆ ಇ-ಮೇಲ್ ಮೂಲಕ ಬಹಿರಂಗಪಡಿಸಿದ್ದಾನೆ ಎಂದು ವರದಿಯಾಗಿದೆ.
ಪೊಲೀಸರು ತನಿಖೆ ಚುರುಕುಗೊಳಿಸಿದ ಬಳಿಕ ತಾನೂ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಭಯದಿಂದ ಗೌರವ್ ತನ್ನ ದೂರನ್ನು ಹಿಂಪಡೆಯಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಆದರೆ ಅಷ್ಟರಲ್ಲಾಗಲೇ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.
ಈ ಪ್ರಕರಣದಲ್ಲಿ ಪ್ರಶ್ನೆಪತ್ರಿಕೆ ಹೇಗೆ ಸೋರಿಕೆಯಾಯಿತು, ಹಣದ ವಹಿವಾಟಿನಲ್ಲಿ ಇನ್ನೆಷ್ಟು ಮಂದಿ ಭಾಗಿಯಾಗಿದ್ದಾರೆ ಹಾಗೂ ಪರೀಕ್ಷಾ ಅಕ್ರಮದ ಹಿಂದೆ ಇರುವ ಸಂಪೂರ್ಣ ಜಾಲದ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.







