ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶೇ.75ರಷ್ಟು ಹಾಜರಾತಿ ಹೊಂದಿರುವ ಎಸೆಸೆಲ್ಸಿ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಅಪ್ ಲೋಡ್ ಮಾಡುವಂತೆ ನಿರ್ದೇಶನ ನೀಡಿದೆ.
Http://www.kseeb.kar.nic.in ವೆಬ್ ಸೈಟ್ ನಲ್ಲಿ ಲಾಗ್ ಇನ್ ಆಗಿ ಲಭ್ಯ ತಂತ್ರಾಂಶವನ್ನು ಬಳಸಿ ಎಲ್ಲಾ ಶಾಲೆಗಳ ಮುಖ್ಯಸ್ಥರು ಮಾರ್ಚ್ 6ರೊಳಗೆ ಆಯಾ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನಮೂದಿಸಲು ಸೂಚಿಸಲಾಗಿದೆ.
ಶೇ. 75ಕ್ಕಿಂತ ಕಡಿಮೆ ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳ ಆಂತರಿಕ ಅಂಕ ನೋಂದಣಿಗೆ ಅವಕಾಶ ಇಲ್ಲ ಎಂದಿರುವ ಮಂಡಳಿ, ಶೇ.75ರಷ್ಟು ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳ ಆಂತರಿಕ ಅಂಕಗಳ ನೋಂದಣಿಗೆ ಮಾತ್ರ ಅವಕಾಶವೆಂದು ಸ್ಪಷ್ಟಪಡಿಸಿದೆ.
ವೆಬ್ ಸೈಟ್ ಗೆ ಲಾಗ್ ಇನ್ ಆದ ಕೂಡಲೇ ಇಂಟರ್ ನಲ್ ಮಾರ್ಕ್ಸ್ ಎಂಟ್ರಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಂತರ ವಿದ್ಯಾರ್ಥಿಯ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು. ಶೇ. 75ರಷ್ಟು ಹಾಜರಾತಿ ಹೊಂದಿರುವ ಬಗ್ಗೆ ‘ಎಸ್’ ಅಥವಾ ‘ನೋ’ ಎಂದು ನಮೂದಿಸಿ ವ್ಯೂ ಬಟನ್ ಕ್ಲಿಕ್ ಮಾಡಬೇಕು. ಆಗ ವಿದ್ಯಾರ್ಥಿಯ ಪೂರ್ಣ ಮಾಹಿತಿ ಬರುತ್ತದೆ. ನಂತರ ವಿದ್ಯಾರ್ಥಿಯ ವಿವರಗಳನ್ನು ಖಚಿತ ಪಡಿಸಿಕೊಂಡು, ಆಂತರಿಕ ಅಂಕ ಅಪ್ ಲೋಡ್ ಮಾಡಬೇಕು ಎಂದು ಮಂಡಳಿ ಮಾಹಿತಿ ನೀಡಿದೆ.
ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನಮೂದಿಸಿ, ಅಂತಿಮಗೊಳಿಸುವ ಮೊದಲು ವಿದ್ಯಾರ್ಥಿಯ ಹೆತ್ತವರಿಗೆ ಮಾಹಿತಿ ನೀಡಿ ಸಹಿ ಪಡೆಯಬೇಕು ಎಂದು ಮಂಡಳಿ ತಿಳಿಸಿದೆ.








