ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಭವಿಷ್ಯದ ಕುರಿತು ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ಘೋಷಣೆಯೊಂದನ್ನು ಮಾಡಿದ್ದಾರೆ. ಇನ್ಮುಂದೆ ತಾವು ಯಾವುದೇ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ನಗರದಲ್ಲಿ ನಡೆದ ವೀರಣ್ಣ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಚುನಾವಣಾ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನನಗೆ ಈಗ 80 ವರ್ಷ ವಯಸ್ಸಾಗಿದೆ. ನಾನು ಆರೋಗ್ಯವಾಗಿದ್ದೇನೆ ನಿಜ, ಆದರೆ ಎಷ್ಟು ವರ್ಷ ಬದುಕಿರುತ್ತೇನೆ ಎಂಬುದು ನನಗೆ ತಿಳಿದಿಲ್ಲ. ಈ ಹಂತದಲ್ಲಿ ನಾನು ಚುನಾವಣಾ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಚುನಾವಣಾ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಈಗಿನ ಕಾಲದಲ್ಲಿ ಚುನಾವಣೆಗಳು ಅತ್ಯಂತ ದುಬಾರಿಯಾಗಿವೆ. 1983ರಲ್ಲಿ ನಾನು ಮೊದಲ ಬಾರಿಗೆ ಸ್ಪರ್ಧಿಸಿದ ಚುನಾವಣೆಗೂ ಮತ್ತು 2023ರ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಪ್ರಾಮಾಣಿಕವಾಗಿ ಚುನಾವಣೆ ಎದುರಿಸುವುದು ಇಂದಿನ ದಿನಗಳಲ್ಲಿ ಸವಾಲಿನ ಕೆಲಸವಾಗಿದೆ. ವ್ಯವಸ್ಥೆಯಲ್ಲಿ ಸುಧಾರಣೆ ತರದೇ ನಾನು ಮಾತ್ರ ಪ್ರಾಮಾಣಿಕ ಎಂದರೆ ಅದು ನನಗೆ ನಾನೇ ಮಾಡಿಕೊಳ್ಳುವ ಆತ್ಮವಂಚನೆಯಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಸಿದ್ದರಾಮಯ್ಯ, 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದನ್ನು ನೆನಪಿಸಿಕೊಂಡರು. ಅಂದೇ ನಾನು ಲೋಕಸಭೆಗೆ ಮತ್ತೆ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದೆ. ಇತ್ತೀಚೆಗೆ ಲೋಕಸಭೆಗೆ ಸ್ಪರ್ಧಿಸಲು ಹಲವು ಆಫರ್ ಗಳು ಬಂದಿದ್ದರೂ ಅವುಗಳನ್ನು ನಾನು ನಯವಾಗಿಯೇ ತಿರಸ್ಕರಿಸಿದ್ದೇನೆ. ಇನ್ನು ಮುಂದೆ ಯಾವುದೇ ಚುನಾವಣೆಯ ಕಣಕ್ಕಿಳಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆದರೆ, ಚುನಾವಣೆಗೆ ಸ್ಪರ್ಧಿಸದಿದ್ದರೂ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಅವರು ಭರವಸೆ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇದ್ದುಕೊಂಡು ಹದಗೆಟ್ಟಿರುವ ವ್ಯವಸ್ಥೆಯನ್ನು ಸುಧಾರಿಸಲು ಹೋರಾಟ ಮಾಡುವುದು ಅಗತ್ಯವಿದೆ. ಚುನಾವಣೆಯಲ್ಲಿ ಅಕ್ರಮವಾಗಿ ಹಣ ಖರ್ಚು ಮಾಡುವುದನ್ನು ತಡೆಯಲು ಜನರು ಸಹಕರಿಸಬೇಕು. ಈ ವ್ಯವಸ್ಥೆಯಲ್ಲಿ ಬದಲಾವಣೆ ತರುವುದೇ ನಾವು ಹಿರಿಯ ಚೇತನಗಳಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಸಿದ್ದರಾಮಯ್ಯ ಕರೆ ನೀಡಿದರು.ಮಾಜಿ ಮುಖ್ಯಮಂತ್ರಿಗಳ ಈ ಹೇಳಿಕೆ ಈಗ ಕಾಂಗ್ರೆಸ್ ಪಾಳಯದಲ್ಲಿ ಮಾತ್ರವಲ್ಲದೆ ಇಡೀ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.








