ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಮೆರಿಕದಲ್ಲಿ ನೀಡುತ್ತಿರುವ ಹೇಳಿಕೆಗಳ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತದಲ್ಲಿ ಒಂದು ರೀತಿಯ ಭಾಷೆ ಬಳಸುವ ಸಂಘ ಪರಿವಾರ, ವಿದೇಶಿ ನೆಲದಲ್ಲಿ ತನ್ನ ಬಣ್ಣ ಬದಲಾಯಿಸುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ನ್ಯೂಯಾರ್ಕ್ ನಲ್ಲಿ ನಡೆದ ಒಂದು ವರ್ಲ್ಡ್ ಒನ್ ಹ್ಯುಮಾನಿಟಿ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, ಹಿಂದುತ್ವದ ಪರಿಕಲ್ಪನೆಯು ಮುಸ್ಲಿಮರಿಲ್ಲದ ಭಾರತವನ್ನು ಬಯಸುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿರುವ ಪ್ರಿಯಾಂಕ್ ಖರ್ಗೆ, ಪ್ರೇಕ್ಷಕರು ಬದಲಾದಾಗ ಸಂಘ ಪರಿವಾರದ ಭಾಷೆಯಲ್ಲೂ ಎಷ್ಟು ದೊಡ್ಡ ಬದಲಾವಣೆ ಕಂಡುಬರುತ್ತಿದೆ ನೋಡಿ ಎಂದು ಟೀಕಿಸಿದ್ದಾರೆ.
ಭಾರತದಲ್ಲಿ ಕಳೆದ ನೂರು ವರ್ಷಗಳಿಂದ ಹಿಂದೂ ರಾಷ್ಟ್ರದ ಜಪ ಮಾಡುತ್ತಾ, ಧಾರ್ಮಿಕ ಧ್ರುವೀಕರಣದ ರಾಜಕಾರಣ ಮಾಡುತ್ತಿರುವ ಆರ್ ಎಸ್ ಎಸ್, ಅಮೆರಿಕಕ್ಕೆ ಹೋದ ತಕ್ಷಣ ವಿಶ್ವಮಾನವ ಏಕತೆ ಮತ್ತು ಧಾರ್ಮಿಕ ಸೌಹಾರ್ದತೆಯ ಬಗ್ಗೆ ಮಾತನಾಡುತ್ತಿರುವುದು ಆಶ್ಚರ್ಯಕರವಾಗಿದೆ. ದೇಶದ ಒಳಗೆ ಒಂದು ನಿಲುವು ಮತ್ತು ವಿದೇಶದಲ್ಲಿ ಮತ್ತೊಂದು ಸಂದೇಶ ನೀಡುವ ಈ ದ್ವಂದ್ವ ನೀತಿಯನ್ನು ಜನರು ಗಮನಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ಮೋಹನ್ ಭಾಗವತ್ ಅವರ ಈ ದಿಢೀರ್ ಬದಲಾವಣೆಯ ಹಿಂದೆ ದೊಡ್ಡ ಹುನ್ನಾರವಿದೆ ಎಂದು ಸಂಶಯ ವ್ಯಕ್ತಪಡಿಸಿರುವ ಸಚಿವರು, ವಿದೇಶದಲ್ಲಿರುವ ಭಾರತೀಯ ಮೂಲದ ಜನರಿಂದ ನಿಧಿ ಸಂಗ್ರಹಿಸಲು ಈ ವಿಶ್ವಮಾನವ ಏಕತೆಯ ಮುಖವಾಡ ಧರಿಸಲಾಗುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ಆರ್ ಎಸ್ ಎಸ್ ನ ವಿದೇಶಿ ಜಾಲ, ಅವರ ಹಣಕಾಸಿನ ಮೂಲ ಮತ್ತು ಸಂಘಟನಾ ವ್ಯವಸ್ಥೆಯ ಬಗ್ಗೆ ಸಮಗ್ರವಾದ ತನಿಖೆ ನಡೆಯುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದ್ದಾರೆ.
ನ್ಯೂಯಾರ್ಕ್ ನ ಕಾರ್ಯಕ್ರಮ ಆಯೋಜಿಸಿದ್ದ ಅಹೆಡ್ (AHEAD) ಸಂಸ್ಥೆಯ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸಂಸ್ಥೆಯು ತಾನು ಧಾರ್ಮಿಕ ಸಾಮರಸ್ಯಕ್ಕಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತದೆ, ಆದರೆ ಅದರ ಸ್ಥಾಪಕರಿಗೂ ಆರ್ ಎಸ್ ಎಸ್ ಗೂ ಹಳೆಯ ನಂಟಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ, ವಿದೇಶಿ ನೆಲದಲ್ಲಿ ಆರ್ ಎಸ್ ಎಸ್ ತನ್ನ ಅಜೆಂಡಾವನ್ನು ಮರೆಮಾಚಿ ಹಣ ಮತ್ತು ಬೆಂಬಲ ಕ್ರೋಢೀಕರಿಸಲು ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ಆರ್ ಎಸ್ ಎಸ್ ಅನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎಂಬ ತಮ್ಮ ಹಳೆಯ ಬೇಡಿಕೆಯನ್ನು ಪುನರುಚ್ಚರಿಸಿದ ಖರ್ಗೆ, ಸಂಘಟನೆಯ ಪಾರದರ್ಶಕತೆಗಾಗಿ ಇದು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಈ ಸರಣಿ ಆರೋಪಗಳು ಈಗ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿವೆ.








