ಪಾಕಿಸ್ತಾನದ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಭಾರತೀಯ ವಾಯುಪಡೆಯ ವೀರಚಕ್ರ ಪ್ರಶಸ್ತಿ ಪುರಸ್ಕೃತ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರು ಭಾರತೀಯ ವಾಯುಪಡೆಯ ಸೇವೆಯಿಂದ ನಿವೃತ್ತರಾಗಿದ್ದು, ಇದೀಗ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
ಅಭಿನಂದನ್ ವರ್ಧಮಾನ್ ಅವರು ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ FLY91ನಲ್ಲಿ ಪೈಲಟ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ. ಅವರು ಕಳೆದ ಆಗಸ್ಟ್ನಲ್ಲಿ FLY91 ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.ಉದ್ಯೋಗಿಗಳ ಗೌಪ್ಯತೆಯನ್ನು ಕಾರಣವಾಗಿಟ್ಟುಕೊಂಡು FLY91 ವಕ್ತಾರರು ಅಭಿನಂದನ್ ಅವರ ನೇಮಕಾತಿ ಕುರಿತು ಅಧಿಕೃತ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
2019ರ ಬಾಲಾಕೋಟ್ ಬಳಿಕ ಜಾಗತಿಕ ಗಮನ
2019ರಲ್ಲಿ ಬಾಲಾಕೋಟ್ ವೈಮಾನಿಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾದ ಸಂದರ್ಭದಲ್ಲಿ ನಡೆದ ವಾಯು ಸಂಘರ್ಷದಲ್ಲಿ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನದ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದಾಗಿ ಭಾರತ ಹೇಳಿತ್ತು. ಬಳಿಕ ಅವರ ಧೈರ್ಯ ಮತ್ತು ಸಾಹಸಕ್ಕಾಗಿ ಅವರಿಗೆ ವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಅವರ ಯುದ್ಧಸೇವೆಯ ಬಳಿಕ ಇದೀಗ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಪೈಲಟ್ ಆಗಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.
ಆರು ATR 72-600 ವಿಮಾನಗಳೊಂದಿಗೆ ಸೇವೆ
FLY91 ಸಂಸ್ಥೆಯು ಗೋವಾ ಮತ್ತು ಹೈದರಾಬಾದ್ ಅನ್ನು ತನ್ನ ಪ್ರಮುಖ ನೆಲೆಗಳನ್ನಾಗಿ ಹೊಂದಿದ್ದು, ಪ್ರಸ್ತುತ ಆರು ATR 72-600 ವಿಮಾನಗಳೊಂದಿಗೆ ಪ್ರಾದೇಶಿಕ ವಿಮಾನಯಾನ ಸಂಪರ್ಕ ಸೇವೆ ಒದಗಿಸುತ್ತಿದೆ.
ವಾಯುಪಡೆಯ ಯುದ್ಧವಿಮಾನ ಪೈಲಟ್ ಆಗಿ ಸೇವೆ ಸಲ್ಲಿಸಿದ್ದ ಅಭಿನಂದನ್ ಅವರು ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶಿಸಿರುವುದು ಗಮನ ಸೆಳೆದಿದ್ದು, ಅವರ ಹೊಸ ವೃತ್ತಿಜೀವನದ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.








