ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಏಕವಚನದಲ್ಲಿ ಮಾತನಾಡುತ್ತಿರುವ ಬಿಜೆಪಿ ಮುಖಂಡ ಶ್ರೀರಾಮುಲು ವಿರುದ್ಧ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರನ್ನು ಇನ್ನೊಂದು ಬಾರಿ ಅವನು ಇವನು ಎಂದರೆ, ನೀನು ಯಾವನೋ ಎಂದು ನಾನು ಕೇಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ನಾಯಕರನ್ನು ಅಂತರಾಷ್ಟ್ರೀಯ ಕಳ್ಳರ ಸಂಘದ ಪದಾಧಿಕಾರಿಗಳಿಗೆ ಹೋಲಿಸಿದ ಪ್ರದೀಪ್ ಈಶ್ವರ್, ಕರ್ನಾಟಕ ಅಂತರಾಷ್ಟ್ರೀಯ ಕಳ್ಳರ ಸಂಘದ ಅಧ್ಯಕ್ಷ ಜನಾರ್ದನ ರೆಡ್ಡಿ ಹಾಗೂ ಉಪಾಧ್ಯಕ್ಷ ಶ್ರೀರಾಮುಲು ಎಂದು ಲೇವಡಿ ಮಾಡಿದರು. ಕರ್ನಾಟಕವನ್ನು ಲೂಟಿ ಮಾಡಿದ್ದೇ ಈ ಇಬ್ಬರು ನಾಯಕರು ಎಂದು ಅವರು ಗಂಭೀರವಾಗಿ ಆರೋಪಿಸಿದರು.
ಬಿಜೆಪಿ ಆಡಳಿತಾವಧಿಯ ಸಾಲು ಸಾಲು ಹಗರಣಗಳ ಪಟ್ಟಿ ಬಿಡುಗಡೆ ಮಾಡಿದ ಶಾಸಕರು, ರಾಜ್ಯವನ್ನು ಲೂಟಿ ಮಾಡಿದವರಿಂದ ನಾವು ಪಾಠ ಕಲಿಯುವ ಅವಶ್ಯಕತೆಯಿಲ್ಲ ಎಂದರು. ಕೋವಿಡ್ ಹಗರಣ, ಬೋವಿ ನಿಗಮದ ಅಕ್ರಮ, ನೀಟ್ ಅವ್ಯವಹಾರ, ದೇವರಾಜ್ ಅರಸು ಟ್ರಕ್ ಟರ್ಮಿನಲ್ ಹಗರಣ, ಕಿಯೋನಿಕ್ಸ್ ಭ್ರಷ್ಟಾಚಾರ, ಪಿಎಸ್ಐ ನೇಮಕಾತಿ ಅಕ್ರಮ, ಪರಶುರಾಮ್ ಥೀಮ್ ಪಾರ್ಕ್, ಬಿಟ್ ಕಾಯಿನ್ ಹಾಗೂ ಕೆಕೆಆರ್ ಡಿ ಅಕ್ರಮಗಳು ನಡೆದಿದ್ದು ಬಿಜೆಪಿ ಅವಧಿಯಲ್ಲೇ ಎಂದು ಗುಡುಗಿದರು.
ಯಡಿಯೂರಪ್ಪ, ಬೊಮ್ಮಾಯಿ, ಶ್ರೀರಾಮುಲು, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಸುಧಾಕರ್, ಜನಾರ್ದನ ರೆಡ್ಡಿ ಮತ್ತು ಅಶೋಕ್ ಅವರ ಕಾಲದಲ್ಲಿ ನಡೆದ ಈ ಲೂಟಿಗಳಿಗೆ ಮೊದಲು ಉತ್ತರ ನೀಡಲಿ ಎಂದು ಸವಾಲು ಹಾಕಿದರು.
ನಮ್ಮ ಕಾಂಗ್ರೆಸ್ ಸರ್ಕಾರ ಗೃಹಿಣಿಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುತ್ತಿದೆ ಮತ್ತು ಅಭಿವೃದ್ಧಿಗಾಗಿ 57 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ವಿರೋಧ ಪಕ್ಷದ ನಾಯಕರಿಗೆ ರಾಜ್ಯದ ಬರಗಾಲದ ಬಗ್ಗೆ ಮಾತನಾಡಲು ಅರಿವಿಲ್ಲ, ಕೇವಲ ಡೊಳ್ಳು ಹೊಡೆದು ಡ್ಯಾನ್ಸ್ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಗೌರವಯುತವಾಗಿ ಮಾತನಾಡುವುದನ್ನು ಕಲಿಯದಿದ್ದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಶ್ರೀರಾಮುಲುಗೆ ಎಚ್ಚರಿಸಿದರು.







