ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಏರೋ ಇಂಡಿಯಾ 2027’ ವೈಮಾನಿಕ ಪ್ರದರ್ಶನಕ್ಕೆ ದಿನಾಂಕ ನಿಗದಿಯಾಗಿದೆ. 16ನೇ ಆವೃತ್ತಿಯ ಈ ಬೃಹತ್ ಏರ್‌ಶೋ 2027ರ ಫೆಬ್ರವರಿ 8ರಿಂದ 12ರವರೆಗೆ ಒಟ್ಟು ಐದು ದಿನಗಳ ಕಾಲ ನಡೆಯಲಿದೆ.
ಏಷ್ಯಾದ ಪ್ರಮುಖ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾಗಿರುವ ಏರೋ ಇಂಡಿಯಾ, ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನಲ್ಲಿ ನಡೆಯುತ್ತದೆ. 2027ರ ಆವೃತ್ತಿಯೂ ಯಲಹಂಕ ವಾಯುಪಡೆಯ ನಿಲ್ದಾಣದಲ್ಲೇ ಆಯೋಜನೆಯಾಗಲಿದೆ.
ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಸೇಷನ್ (DEO) ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಹಯೋಗ ನೀಡಲಿದೆ.
ಐದು ದಿನಗಳ ಈ ಮೇಳದಲ್ಲಿ ದೇಶ-ವಿದೇಶಗಳ ವಿಮಾನ ತಯಾರಕರು, ರಕ್ಷಣಾ ಸಂಸ್ಥೆಗಳು, ಏರೋಸ್ಪೇಸ್ ಕಂಪನಿಗಳು ಹಾಗೂ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ವೈಮಾನಿಕ ಪ್ರದರ್ಶನದ ಜೊತೆಗೆ ರಕ್ಷಣಾ ಉತ್ಪಾದನೆ, ಸ್ವದೇಶೀ ತಂತ್ರಜ್ಞಾನ, ಹೂಡಿಕೆ ಹಾಗೂ ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕೆ ಈ ಮೇಳ ಪ್ರಮುಖ ವೇದಿಕೆಯಾಗಲಿದೆ.
2025ರಲ್ಲಿ ನಡೆದ 15ನೇ ಆವೃತ್ತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಪ್ರಮಾಣದ ಭಾಗವಹಿಸುವಿಕೆ ಕಂಡುಬಂದಿತ್ತು. ಇದೀಗ 2027ರ ಆವೃತ್ತಿಯನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ.








