ಬೆಂಗಳೂರು : ರಾಜ್ಯ ಸರ್ಕಾರದ ಮನವಿಗಳಿಗೆ ಸ್ಪಂದಿಸದ ಖಾಸಗಿ ಮೆಡಿಕಲ್ ಕಾಲೇಜುಗಳ ಲೈಸನ್ಸ್ ರದ್ದು ಮಾಡುವುದಾಗಿ ಸಚಿವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಆರೋಗ್ಯದ ಈ ತುರ್ತುಪರಿಸ್ಥಿತಿಯಲ್ಲಿ ಮೆಡಿಕಲ್ ಕಾಲೇಜುಗಳಿಗೆ ಬೆದರಿಕೆ ಹಾಕುವುದು ಸರಿಯಲ್ಲ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಚಿಕಿತ್ಸೆ ನಿರಾಕರಿಸುವುದು ಯಾವುದೇ ಆಸ್ಪತ್ರೆಯ ತಪ್ಪು. ಆದರೆ ಅದೇ ಕಾರಣಕ್ಕೆ ಸರ್ಕಾರ ಮೆಡಿಕಲ್ ಕಾಲೇಜುಗಳ ಲೈಸನ್ಸ್ ರದ್ದು ಮಾಡುವ ಬೆದರಿಕೆ ಹಾಕುವುದು ಸರಿಯಲ್ಲ. ಆರೋಗ್ಯದ ಈ ತುರ್ತುಪರಿಸ್ಥಿತಿಯಲ್ಲಿ ಅದರಿಂದ ಲಾಭವೂ ಇಲ್ಲ. ಅಷ್ಟಕ್ಕೂ ಮೆಡಿಕಲ್ ಕಾಲೇಜುಗಳ ಲೈಸನ್ಸ್ ರದ್ದು ಮಾಡುವ ಅಧಿಕಾರ ಇರುವುದು ಎಂಸಿಐಗೆ. ಸರ್ಕಾರಕ್ಕಲ್ಲ ನೆನಪಿರಲಿ”.
“ಈ ಪರಿಸ್ಥಿಯಲ್ಲಿ ಮೆಡಿಕಲ್ ಕಾಲೇಜುಗಳ ಮೇಲೆ ರೋಷಾವೇಶ ತೋರುವುದನ್ನು ಬಿಟ್ಟು ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡು ಅವರ ಸೇವೆ ಪಡೆಯುವತ್ತ ಸರ್ಕಾರ ಗಮನಹರಿಸಲಿ. ಅವರ ಅಗತ್ಯಗಳನ್ನು ಪೂರೈಸುವತ್ತ ಗಮನ ಹರಿಸಲಿ. ಈ ಮೂಲಕ ಕೊರೊನಾ ವೈರಸ್ ವಿರುದ್ಧ ಸಾಂಘಿಕ ಹೋರಾಟ ನಡೆಸಲಿ” ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.








