ಮಂಡ್ಯ: ಭಾರತ ಸಂವಿಧಾನದ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೀಳಾಗಿ ಮಾತನಾಡಿರುವ ವಿಡಿಯೋವೊಂದು ಈಗ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ವೇದಮೂರ್ತಿ ಎಂಬ ವ್ಯಕ್ತಿ ಅಂಬೇಡ್ಕರ್ ಅವರ ವಿರುದ್ಧ ಏಕವಚನದಲ್ಲಿ ನಿಂದನೆ ಮಾಡಿದ್ದು, ಸಂವಿಧಾನ ಬರೆಯುವಾಗ ಮದ್ಯ ಸೇವಿಸಿದ್ದಿರಾ ಎಂದು ಕೇಳುವ ಮೂಲಕ ನೀಚತನ ಮೆರೆದಿದ್ದಾನೆ.
ಸಮಾಜದಲ್ಲಿ ಶಾಂತಿ ಕದಡುವ ಮತ್ತು ದೇಶದ ಮಹಾನ್ ನಾಯಕರಿಗೆ ಅವಮಾನ ಮಾಡುವ ಉದ್ದೇಶದಿಂದಲೇ ಈ ವಿಡಿಯೋ ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ವಿಡಿಯೋದಲ್ಲಿ ವೇದಮೂರ್ತಿ ಎಂಬಾತ ಅಂಬೇಡ್ಕರ್ ಅವರಿಗೆ ಮಿಸ್ಟರ್ ಅಂಬೇಡ್ಕರ್ ಎಂದು ಸಂಬೋಧಿಸಿ, ಸಂವಿಧಾನ ಬರೆಯುವಾಗ ಎಣ್ಣೆ ಹೊಡೆದಿದ್ರಾ ಎಂದು ಪ್ರಶ್ನಿಸಿದ್ದಾನೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಈತ ತನ್ನ ಅಸಹನೆ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಿಗುವ ಮೀಸಲಾತಿಯನ್ನು ಗುರಿಯಾಗಿಸಿಕೊಂಡು ಮಾತನಾಡಿರುವ ಈ ವ್ಯಕ್ತಿ, ಸಂವಿಧಾನ ನೀಡಿರುವ ಸವಲತ್ತುಗಳ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದಾನೆ. ಶಿಕ್ಷಣದಲ್ಲಿ ರಿಯಾಯಿತಿ, ಪೆಟ್ರೋಲ್ ಪಂಪ್ ಸಬ್ಸಿಡಿಯಂತಹ ವಿಚಾರಗಳನ್ನು ಪ್ರಸ್ತಾಪಿಸಿ, ಅಂತಿಮವಾಗಿ ಸಂವಿಧಾನ ಬರೆದವರ ಬಗ್ಗೆಯೇ ಅಸಭ್ಯವಾಗಿ ವರ್ತಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂಘಟನೆಗಳು ಮತ್ತು ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ ಈ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂಬ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.







