ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹೆತ್ತ ತಂದೆ-ತಾಯಿಯನ್ನೇ ನ್ಯಾಯಾಲಯಕ್ಕೆ ಎಳೆದು ತಂದಿದ್ದ ಮಗನಿಗೆ ಸುಪ್ರೀಂ ಕೋರ್ಟ್ ತೀವ್ರವಾಗಿ ಬುದ್ಧಿಮಾತು ಹೇಳಿದೆ. ಕಾನೂನು ಹಕ್ಕುಗಳ ಜೊತೆಗೆ ಮಾನವೀಯ ಸಂಬಂಧಗಳಿಗೂ ಮಹತ್ವವಿದೆ ಎಂಬುದನ್ನು ನೆನಪಿಸಿದ ನ್ಯಾಯಪೀಠ, ಮಗನ ಅರ್ಜಿಯನ್ನು ವಜಾಗೊಳಿಸಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು ಮಗನ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿ, ಮೊದಲು ತಾಯಿಯ ಬಳಿಗೆ ತೆರಳಿ, ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿ, ಆಶೀರ್ವಾದ ಪಡೆಯುವಂತೆ ಮೌಖಿಕವಾಗಿ ಸೂಚಿಸಿದ್ದಾರೆ.
ಆಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಒತ್ತಡ
ವರದಿಯ ಪ್ರಕಾರ, ಪ್ರಕರಣವು ದೆಹಲಿಯಲ್ಲಿರುವ ಬೃಹತ್ ಆಸ್ತಿಗೆ ಸಂಬಂಧಿಸಿದೆ. ಆಸ್ತಿಯ ಸಂಪೂರ್ಣ ಮಾಲೀಕತ್ವ ತಂದೆ-ತಾಯಿಯದ್ದಾಗಿದ್ದು, ಅವರು ತಮ್ಮ ಮಗ ಮತ್ತು ಸೊಸೆಗೆ ಯಾವುದೇ ಬಾಡಿಗೆ ಪಡೆಯದೆ ಮೊದಲ ಮಹಡಿಯಲ್ಲಿ ವಾಸಿಸಲು ಅವಕಾಶ ನೀಡಿದ್ದರು.ಆದರೆ, ಕಾಲಕ್ರಮೇಣ ಮಗ ಮತ್ತು ಸೊಸೆ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ತಂದೆ-ತಾಯಿಯ ಮೇಲೆ ಒತ್ತಡ ಹೇರಲು ಆರಂಭಿಸಿದರು ಎಂಬುದು ಪೋಷಕರ ಆರೋಪ.ವಿವಾದ ತೀವ್ರಗೊಂಡ ನಂತರ, ತಂದೆ-ತಾಯಿ ಮಗನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿರುವುದಾಗಿ ಪತ್ರಿಕೆಯಲ್ಲಿ ಸಾರ್ವಜನಿಕ ಪ್ರಕಟಣೆ (Public Notice) ಕೂಡ ನೀಡಿದ್ದರು.
ನಕಲಿ ದಾಖಲೆ ಸೃಷ್ಟಿಸಿದ ಆರೋಪ
ಪೋಷಕರ ಆರೋಪದ ಪ್ರಕಾರ, ಆಸ್ತಿಯ ಮೇಲೆ ಹಕ್ಕು ಸಾಧಿಸಲು ಮಗ ಮತ್ತು ಸೊಸೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಇದರಿಂದ ಬೇಸತ್ತ ತಂದೆ-ತಾಯಿ ಮಗನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಅಲ್ಲದೆ, ಮಗನಿಗೆ ಮೊದಲ ಮಹಡಿಯಲ್ಲಿ ವಾಸಿಸಲು ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿ, ಮನೆಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದರು.
ಟ್ರಯಲ್ ಕೋರ್ಟ್‌ನಲ್ಲಿ ಪೋಷಕರಿಗೆ ಜಯ
ತಮ್ಮ ಆಸ್ತಿಯನ್ನು ಮರಳಿ ಪಡೆಯಲು ಹಾಗೂ ಮಗ-ಸೊಸೆಗೆ ಶಾಶ್ವತ ತಡೆಯಾಜ್ಞೆ ನೀಡುವಂತೆ ತಂದೆ-ತಾಯಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ಟ್ರಯಲ್ ಕೋರ್ಟ್, ತಂದೆ-ತಾಯಿಯೇ ಆಸ್ತಿಯ ನಿಜವಾದ ಮಾಲೀಕರು ಎಂದು ತೀರ್ಪು ನೀಡಿ, ಮಗನಿಗೆ ನೀಡಿದ್ದ ವಾಸದ ಅನುಮತಿಯನ್ನು ರದ್ದುಗೊಳಿಸಿರುವುದು ಸರಿಯಾಗಿದೆ ಎಂದು ಹೇಳಿತ್ತು. ಅಲ್ಲದೆ, ಮಗ ಮತ್ತು ಸೊಸೆ ತಕ್ಷಣವೇ ಮೊದಲ ಮಹಡಿಯನ್ನು ಖಾಲಿ ಮಾಡುವಂತೆ ಆದೇಶಿಸಿತ್ತು.
ದೆಹಲಿ ಹೈಕೋರ್ಟ್ ಕೂಡ ತೀರ್ಪು ಎತ್ತಿಹಿಡಿಯಿತು
ಟ್ರಯಲ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಗ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಆದರೆ ಏಪ್ರಿಲ್ 17ರಂದು ದೆಹಲಿ ಹೈಕೋರ್ಟ್ ಕೂಡ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು.
ಇದನ್ನು ಪ್ರಶ್ನಿಸಿ ಮಗ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿ (Special Leave Petition) ಸಲ್ಲಿಸಿದ್ದ.
ಸುಪ್ರೀಂ ಕೋರ್ಟ್‌ನಲ್ಲೂ ಮಗನಿಗೆ ಹಿನ್ನಡೆ
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು ಕೆಳ ನ್ಯಾಯಾಲಯಗಳ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ, ಮಗ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.ವಿಚಾರಣೆ ವೇಳೆ ನ್ಯಾಯಮೂರ್ತಿಗಳು ತಾಯಿಯೊಂದಿಗೆ ಮಗ ಈ ರೀತಿ ನಡೆದುಕೊಳ್ಳುವುದು ತಪ್ಪಲ್ಲವೇ? ಎಂಬ ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಮೊದಲು ತಾಯಿಯ ಬಳಿ ತೆರಳಿ ಕ್ಷಮೆ ಕೇಳಿ ಆಶೀರ್ವಾದ ಪಡೆಯುವಂತೆ ಬುದ್ಧಿಮಾತು ಹೇಳಿದ್ದಾರೆ.
ಆಸ್ತಿ, ಹಣ ಮತ್ತು ಕಾನೂನು ಹಕ್ಕುಗಳಿಗಿಂತಲೂ ಹೆತ್ತವರೊಂದಿಗಿನ ಸಂಬಂಧದ ಮೌಲ್ಯ ದೊಡ್ಡದು ಎಂಬ ಮಾನವೀಯ ಸಂದೇಶವನ್ನು ಈ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.








