ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣ ಇಡೀ ರಾಜ್ಯವನ್ನೇ ನಡುಗಿಸಿದೆ. ಈ ಹಗರಣದ ರೂವಾರಿ, ವಿಧಾನಸೌಧದ ಕಾರಿಡಾರ್ಗಳಲ್ಲಿ ದರ್ಬಾರ್ ನಡೆಸುತ್ತಿದ್ದ ಬಸವರಾಜ್ ಕನ್ನಾಳೆ ಎಂಬ ಸಾಮಾನ್ಯ ವ್ಯಕ್ತಿ ಕೇವಲ ಐದು ವರ್ಷಗಳಲ್ಲಿ ನೂರಾರು ಕೋಟಿ ರೂಪಾಯಿಗಳ ಅಧಿಪತಿಯಾಗಿ ಬೆಳೆದ ಕಥೆ ಈಗ ಸಿಐಡಿ ತನಿಖೆಯಲ್ಲಿ ಬಹಿರಂಗಗೊಂಡಿದೆ. ಒಬ್ಬ ಸಾಮಾನ್ಯ ಉದ್ಯೋಗಾಕಾಂಕ್ಷಿಯಾಗಿದ್ದವನು ರಾಜ್ಯದ ಅತಿದೊಡ್ಡ ನೇಮಕಾತಿ ದಂಧೆಯ ಕಿಂಗ್ಪಿನ್ ಆಗಿ ಬದಲಾದ ರೋಚಕ ಇತಿಹಾಸ ಇಲ್ಲಿದೆ.
ದಲ್ಲಾಳಿಯ ದರ್ಬಾರ್
ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಬಸವರಾಜ್ ಕನ್ನಾಳೆ, ಮೈಸೂರಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿ ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತು ದೆಹಲಿಗೆ ಹಾರಿದ್ದ. ಆದರೆ ಅಲ್ಲಿ ಸಿಕ್ಕಿದ್ದು ನಾಗರಿಕ ಸೇವೆಯ ಜ್ಞಾನಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರದ ಅಡ್ಡಹಾದಿಗಳು. ದೆಹಲಿಯ ಪ್ರತಿಷ್ಠಿತ ಕೋಚಿಂಗ್ ಸೆಂಟರ್ಗಳಲ್ಲಿ ತರಬೇತಿ ಪಡೆಯುವಾಗಲೇ ವ್ಯವಸ್ಥೆಯ ಓರೆಕೋರೆಗಳನ್ನು ಬಳಸಿಕೊಂಡು ಹೇಗೆ ಹಣ ಮಾಡಬಹುದು ಎಂಬ ಅಕ್ರಮ ವಿದ್ಯೆಯನ್ನು ಈತ ಕರಗತ ಮಾಡಿಕೊಂಡಿದ್ದ. ಇದೇ ಜ್ಞಾನವನ್ನು ಬಳಸಿಕೊಂಡು ಕರ್ನಾಟಕಕ್ಕೆ ವಾಪಸಾದ ಕನ್ನಾಳೆ, ರಾಜಕೀಯ ನಾಯಕರ ಆಪ್ತ ವಲಯಕ್ಕೆ ಲಗ್ಗೆ ಇಟ್ಟಿದ್ದ.
ರಾಜಕೀಯ ನಂಟು
ಮೈಸೂರು ಭಾಗದ ಪ್ರಭಾವಿ ಶಾಸಕರೊಬ್ಬರ ಪುತ್ರನ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಕನ್ನಾಳೆ, ಮೊದಲು ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದ. ನಂತರ ಕಾಲಕ್ಕೆ ತಕ್ಕಂತೆ ಬಣ್ಣ ಬದಲಿಸಿ ಬಿಜೆಪಿ ಕಡೆಗೆ ವಾಲಿ, 2018ರಲ್ಲಿ ಬೀದರ್ ಭಾಗದ ಬಿಜೆಪಿ ಶಾಸಕರೊಬ್ಬರ ಆಪ್ತ ಸಹಾಯಕನಾಗಿ ನೇಮಕಗೊಂಡಿದ್ದ. ಇದೇ ಈತನ ಜೀವನದ ಗತಿಯನ್ನೇ ಬದಲಿಸಿತು. ಶಾಸಕರ ಪಿಎ ಎಂಬ ಹಣೆಪಟ್ಟಿ ಕಟ್ಟಿಕೊಂಡು ವಿಧಾನಸೌಧದ ಶಕ್ತಿ ಸೌಧದಲ್ಲಿ ಅಧಿಕಾರಿಗಳ ಮೇಲೆ ಸವಾರಿ ಮಾಡಲು ಶುರು ಮಾಡಿದ್ದ. ಫೈಲ್ ಹಿಡಿದು ಓಡಾಡುತ್ತಿದ್ದ ಈತ, ಮೆಲ್ಲನೆ ವರ್ಗಾವಣೆ ಮತ್ತು ನೇಮಕಾತಿ ದಂಧೆಯ ಮಧ್ಯವರ್ತಿಯಾಗಿ ಬೆಳೆದಿದ್ದ.
ಐಎಎಸ್ ಅಧಿಕಾರಿಗಳ ಜತೆ ಸೇರ ನೂರಾರು ಕೋಟಿ ಲೂಟಿ
ವಿಧಾನಸೌಧದಲ್ಲಿ ಅಧಿಕಾರಿಗಳಿಗೆ ದುಬಾರಿ ಉಡುಗೊರೆ, ಪಂಚತಾರಾ ಹೋಟೆಲ್ಗಳಲ್ಲಿ ಮೋಜು ಮಸ್ತಿ ಕೂಟಗಳನ್ನು ಆಯೋಜಿಸುತ್ತಿದ್ದ ಕನ್ನಾಳೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಸೇರಿದಂತೆ ಹಲವು ಉನ್ನತಾಧಿಕಾರಿಗಳನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಕೆಪಿಎಸ್ಸಿ ಸದಸ್ಯರನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವಷ್ಟು ಪ್ರಭಾವಶಾಲಿಯಾಗಿದ್ದ ಈತ, ನೂರಾರು ಅಭ್ಯರ್ಥಿಗಳಿಂದ ಕೋಟಿ ಕೋಟಿ ಹಣ ವಸೂಲಿ ಮಾಡಿದ್ದ ಎನ್ನಲಾಗಿದೆ. ಸಿಐಡಿ ತನಿಖೆಯ ವೇಳೆ ಈತ ಕೇವಲ ಐದು ವರ್ಷಗಳಲ್ಲಿ ನೂರಾರು ಕೋಟಿ ಆಸ್ತಿ ಮಾಡಿರುವ ಸ್ಫೋಟಕ ಸತ್ಯ ಬಯಲಾಗಿದೆ.
ಕಪ್ಪು ಹಣ ಬಿಳಿ ಮಾಡಲು ರಿಯಲ್ ಎಸ್ಟೇಟ್ ಮತ್ತು ಟ್ರಾವೆಲ್ಸ್ ದಂಧೆ
ನೇಮಕಾತಿ ಹಗರಣದಿಂದ ಬಂದ ಹಣವನ್ನು ಕನ್ನಾಳೆ ಕೇವಲ ಬ್ಯಾಂಕ್ನಲ್ಲಿ ಇಡಲಿಲ್ಲ. ಅದನ್ನು ಬಿಳಿ ಮಾಡಲು ಟ್ರಾವೆಲ್ಸ್ ಬಿಸಿನೆಸ್, ರಿಯಲ್ ಎಸ್ಟೇಟ್ ಮತ್ತು ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದ. ಪ್ರಭಾವಿ ರಾಜಕಾರಣಿಗಳ ಬೇನಾಮಿ ಆಸ್ತಿಗಳ ನಿರ್ವಹಣೆಯಲ್ಲೂ ಈತನ ಕೈವಾಡವಿದೆ ಎಂಬ ಸಂಶಯ ವ್ಯಕ್ತವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರ ಜೊತೆ ಸ್ನೇಹ ಹೊಂದಿದ್ದ ಈತ, ವ್ಯವಸ್ಥೆಯನ್ನು ತನ್ನಿಷ್ಟದಂತೆ ಕುಣಿಸುತ್ತಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.
ಪರಪ್ಪನ ಅಗ್ರಹಾರದ ಕತ್ತಲೆಯಲ್ಲಿ ಕುಬೇರ
ಸದ್ಯ ಸಿಐಡಿ ಅಧಿಕಾರಿಗಳ ಸುದೀರ್ಘ ವಿಚಾರಣೆಯ ಬಳಿಕ ಸತ್ಯ ಒಪ್ಪಿಕೊಂಡಿರುವ ಬಸವರಾಜ್ ಕನ್ನಾಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಐಷಾರಾಮಿ ಜೀವನ ನಡೆಸುತ್ತಿದ್ದ ಈ ಕೋಟಿ ಕುಬೇರ ಈಗ ಪರಪ್ಪನ ಅಗ್ರಹಾರದ ಕಂಬಿ ಎಣಿಸುತ್ತಿದ್ದಾನೆ. ಈತನ ಜಾಲದಲ್ಲಿ ಇನ್ನೂ ಎಷ್ಟು ಅಧಿಕಾರಿಗಳು ಮತ್ತು ರಾಜಕಾರಣಿಗಳಿದ್ದಾರೆ ಎಂಬುದು ಈಗ ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ. ಸಿಐಡಿ ತನಿಖೆ ತೀವ್ರಗೊಂಡಂತೆ ಇನ್ನೂ ಅನೇಕ ದೊಡ್ಡ ತಲೆಗಳು ಉರುಳುವ ಸಾಧ್ಯತೆ ದಟ್ಟವಾಗಿದೆ.








