ಬೆಂಗಳೂರು ಎಂದರೆ ಬರೀ ಟ್ರಾಫಿಕ್ ಕಿರಿಕಿರಿ ಮಾತ್ರವಲ್ಲ, ಈಗ ತೆರಿಗೆಯ ಕಿರಿಕಿರಿ ಕೂಡ ಮಾಮೂಲಾಗಿದೆ. ಈಗಾಗಲೇ ಆಸ್ತಿ ತೆರಿಗೆಯ ಜೊತೆಗೆ ಕಸದ ಸೆಸ್, ಗ್ರಂಥಾಲಯ ಸೆಸ್, ಒಳಚರಂಡಿ ಸೆಸ್ ಹೀಗೆ ಸಾಲು ಸಾಲು ತೆರಿಗೆಗಳನ್ನು ಪಾವತಿಸಿ ಸುಸ್ತಾಗಿರುವ ಬೆಂಗಳೂರಿಗರ ಮೇಲೆ ಈಗ ಹೊಸದೊಂದು ತೆರಿಗೆಯ ಬರೆ ಎಳೆಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಸಾಫ್ಟ್ ವೇರ್ ಶುಲ್ಕ ಎಂಬ ವಿಚಿತ್ರ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ ಹಾಕುವ ಹೊಸ ಐಡಿಯಾವನ್ನು ಜಿಬಿಎ ಜಾರಿಗೆ ತಂದಿದೆ.
ಬೆವರಿಳಿಸುವ ಹೊಸ ತೆರಿಗೆಯ ಲೆಕ್ಕಾಚಾರ
ಹಣ ಮಾಡಲು ಜಿಬಿಎ ಹೊಸ ದಾರಿಗಳನ್ನು ಹುಡುಕುವುದರಲ್ಲಿ ನಿಸ್ಸೀಮವಾಗಿದೆ ಎನ್ನುವುದಕ್ಕೆ ಈ ಸಾಫ್ಟ್ ವೇರ್ ಶುಲ್ಕವೇ ಸಾಕ್ಷಿ. ಈ ಹೊಸ ನಿಯಮದ ಪ್ರಕಾರ, ಬೆಂಗಳೂರಿನ ಪ್ರತಿಯೊಬ್ಬ ಆಸ್ತಿ ಮಾಲೀಕರು ಇನ್ನು ಮುಂದೆ ಸಾಫ್ಟ್ ವೇರ್ ಬಳಸಿದ್ದಕ್ಕಾಗಿ ಶುಲ್ಕ ನೀಡಬೇಕು. ವಸತಿ ಕಟ್ಟಡಗಳಿಗೆ ವಾರ್ಷಿಕ 200 ರೂಪಾಯಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ವಾರ್ಷಿಕ 1000 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ನಗರದಲ್ಲಿರುವ ಸುಮಾರು 25 ಲಕ್ಷ ಆಸ್ತಿಗಳಿಂದ ಈ ಹಣವನ್ನು ವಸೂಲಿ ಮಾಡಲು ಸರ್ಕಾರ ಹಸಿರು ನಿಶಾನೆ ನೀಡಿದೆ. ಈ ವರ್ಷದಿಂದಲೇ ಈ ಶುಲ್ಕ ಜಾರಿಗೆ ಬಂದಿದ್ದು, ಜನರು ಆಸ್ತಿ ತೆರಿಗೆ ಪಾವತಿಸುವಾಗ ಅನಿವಾರ್ಯವಾಗಿ ಈ ಮೊತ್ತವನ್ನೂ ಕಟ್ಟಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತೆರಿಗೆ ಕಟ್ಟೋಕೆ ನಾವು ಕೊಡಬೇಕಾ ಸಾಫ್ಟ್ ವೇರ್ ಶುಲ್ಕ
ಸರ್ಕಾರಕ್ಕೆ ತೆರಿಗೆ ಪಾವತಿಸಲು ನಾವೇ ಸಾಫ್ಟ್ ವೇರ್ ಶುಲ್ಕ ನೀಡಬೇಕೆ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಆಸ್ತಿ ದಾಖಲೆಗಳ ನಿರ್ವಹಣೆ ಮತ್ತು ಡಿಜಿಟಲೀಕರಣದ ನೆಪವೊಡ್ಡಿ ಜನರ ಮೇಲೆ ಈ ಹೊರೆ ಹಾಕಲಾಗಿದೆ. ಜಿಬಿಎ ಅಧಿಕೃತ ಪೋರ್ಟಲ್ ಅಭಿವೃದ್ಧಿಪಡಿಸಲು ಜನರ ಹಣವನ್ನೇ ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂಬ ಆಕ್ರೋಶ ವ್ಯಕ್ತವಾಗಿದೆ. ಕಸ ವಿಲೇವಾರಿಗಾಗಿ ವರ್ಷಕ್ಕೆ 3000 ಕೋಟಿ ರೂಪಾಯಿ ವಸೂಲಿ ಮಾಡುತ್ತಿದ್ದರೂ ನಗರದ ಶುಚಿತ್ವದ ಬಗ್ಗೆ ಯಾವುದೇ ಸುಧಾರಣೆ ಕಾಣುತ್ತಿಲ್ಲ, ಅಂತಹದರಲ್ಲಿ ಈಗ ಸಾಫ್ಟ್ ವೇರ್ ಹೆಸರಲ್ಲಿ ಮತ್ತೊಂದು ಲೂಟಿ ಏಕೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
ಬಿಜೆಪಿ ವತಿಯಿಂದ ಉಗ್ರ ಹೋರಾಟದ ಎಚ್ಚರಿಕೆ
ಜಿಬಿಎಯ ಈ ಸುಲಿಗೆಯ ವಿರುದ್ಧ ಮಾಜಿ ಉಪ ಮೇಯರ್ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್ ಹರೀಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜನರ ಕಣ್ಣಿಗೆ ಮಣ್ಣೆರಚಿ ಡಿಜಿಟಲ್ ವ್ಯವಸ್ಥೆಯ ಹೆಸರಲ್ಲಿ ಹಣ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಈಗಾಗಲೇ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಕಂಗಾಲಾಗಿದ್ದಾರೆ. ಅಡುಗೆ ಅನಿಲ, ವಿದ್ಯುತ್ ಮತ್ತು ನೀರಿನ ಬೆಲೆ ಹೆಚ್ಚಾಗಿರುವಾಗ ಪ್ರತಿ ವರ್ಷ ಹೊಸ ಹೊಸ ಶುಲ್ಕಗಳನ್ನು ಹೇರುವುದು ಜನಸಾಮಾನ್ಯರ ಬದುಕನ್ನು ಕಸಿದುಕೊಂಡಂತೆ. ಈ ಸಾಫ್ಟ್ ವೇರ್ ಶುಲ್ಕವನ್ನು ಕೂಡಲೇ ಹಿಂಪಡೆಯದಿದ್ದರೆ ಬಿಜೆಪಿ ಪಕ್ಷದಿಂದ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಆಡಳಿತಾತ್ಮಕ ದೃಷ್ಟಿಯಿಂದ ಅನಿವಾರ್ಯವೆಂದ ಅಧಿಕಾರಿಗಳು
ಇನ್ನು ಈ ಹೊಸ ಶುಲ್ಕವನ್ನು ಜಿಬಿಎ ವಿಶೇಷ ಆಯುಕ್ತ ಮೌನೀಶ್ ಮುದ್ಗಿಲ್ ಅವರು ಸಮರ್ಥಿಸಿಕೊಂಡಿದ್ದಾರೆ. ಪಂಚ ಪಾಲಿಕೆಗಳ ಆರ್ಥಿಕ ಅಭಿವೃದ್ಧಿ ಮತ್ತು ಸುಧಾರಿತ ಡಿಜಿಟಲ್ ಸೇವೆಗಳನ್ನು ಒದಗಿಸಲು ಈ ಸಾಫ್ಟ್ ವೇರ್ ಶುಲ್ಕ ಅನಿವಾರ್ಯವಾಗಿದೆ. ಆಡಳಿತಾತ್ಮಕ ಶಿಸ್ತು ತರಲು ಮತ್ತು ತಾಂತ್ರಿಕ ವ್ಯವಸ್ಥೆಯನ್ನು ಬಲಪಡಿಸಲು ಜನರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳ ಸಮರ್ಥನೆ ಬೆಂಗಳೂರಿನ ಮಧ್ಯಮ ವರ್ಗದ ಜನರ ಅಸಮಾಧಾನವನ್ನು ಶಮನಗೊಳಿಸುವಲ್ಲಿ ವಿಫಲವಾಗಿದೆ.








