ಬೆಂಗಳೂರು ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ವಿಷಯಗಳಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಅವರು ಅಕ್ಷರಶಃ ಸಮರ ಸಾರಿದ್ದಾರೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆಸಿದ ಚೊಚ್ಚಲ ಕೆಡಿಪಿ ಸಭೆಯಲ್ಲೇ ಸಚಿವರು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಚಾಟಿ ಬೀಸಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ಲೂಟಿ ಮಾಡುತ್ತಿರುವ ವ್ಯವಸ್ಥೆಯ ವಿರುದ್ಧ ಕಟುವಾದ ಶಬ್ದಗಳಿಂದ ವಾಗ್ದಾಳಿ ನಡೆಸಿದ್ದಾರೆ.
ರಸ್ತೆ ಕಾಮಗಾರಿಗಳ ಹಗಲು ದರೋಡೆಗೆ ಬ್ರೇಕ್
ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆ ಕಂಡು ಕೆಂಡಾಮಂಡಲವಾದ ಸಚಿವರು, ಅಧಿಕಾರಿಗಳ ಕುಂಟು ನೆಪಗಳನ್ನು ನುಚ್ಚುನೂರು ಮಾಡಿದರು. ಬೇರೆ ರಾಜ್ಯಗಳಲ್ಲಿ ಮಳೆ ಬರಲ್ವಾ? ಅಲ್ಲಿ ಟ್ರಾಫಿಕ್ ಇಲ್ವಾ? ನಮ್ಮಲ್ಲೇ ಯಾಕೆ ರಸ್ತೆಗಳು ಪದೇ ಪದೇ ಕಿತ್ತು ಹೋಗುತ್ತವೆ ಎಂದು ಪ್ರಶ್ನಿಸಿದ ಅವರು, ಕಳಪೆ ಕಾಮಗಾರಿ ಮಾಡಿ ಪ್ರತಿ ಎರಡು ವರ್ಷಕ್ಕೊಮ್ಮೆ ರೀ ಸರ್ಫೇಸಿಂಗ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಬಿಲ್ ಮಾಡಿಕೊಳ್ಳುವ ದಂಧೆಯನ್ನು ಬಯಲಿಗೆಳೆದರು. ನಮಗೆ ನಿಮ್ಮಷ್ಟು ಬುದ್ಧಿ ಇಲ್ಲದಿರಬಹುದು ಆದರೆ ಕನಿಷ್ಠ ಕಾಮನ್ ಸೆನ್ಸ್ ಇದೆ. ನಿಮ್ಮ ಬುದ್ಧಿವಂತಿಕೆಯನ್ನು ಸರ್ಕಾರದ ಹಣ ಲೂಟಿ ಮಾಡಲು ಬಳಸಬೇಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಹಾಲು ಕೊಡೋ ಹಸು ಕೆಚ್ಚಲನ್ನು ಕೊಯ್ಯಲು ಹೇಸದ ಅಧಿಕಾರಿಗಳು
ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಸಚಿವರು ಬಳಸಿದ ಮಾತುಗಳು ಸಭೆಯಲ್ಲಿ ಎಲ್ಲರನ್ನೂ ಸ್ತಬ್ದಗೊಳಿಸಿದವು. ಹಾಲು ಕೊಡೋ ಹಸು ಕೆಚ್ಚಲನ್ನ ಕೊಯ್ಯಲು ನೀವು ಹೇಸಲ್ಲ ಎನ್ನುವ ಮೂಲಕ, ಜನಸಾಮಾನ್ಯರಿಗೆ ಸೇವೆ ನೀಡಬೇಕಾದ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಅತ್ಯಂತ ತೀಕ್ಷ್ಣವಾಗಿ ಖಂಡಿಸಿದರು. ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯ ಒದಗಿಸದಿದ್ದರೂ, ಸುಳ್ಳು ಬಿಲ್ಗಳನ್ನು ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುವ ಅಧಿಕಾರಿಗಳ ಮನಸ್ಥಿತಿಯನ್ನು ಸಚಿವರು ಪ್ರಶ್ನಿಸಿದರು.
ಒಂದೇ ಕೆಲಸಕ್ಕೆ ಎರಡೆರಡು ಬಿಲ್
ಸಭೆಯಲ್ಲಿ ಕೇಳಿಬಂದ ಮತ್ತೊಂದು ಗಂಭೀರ ಆರೋಪವೆಂದರೆ ಹಣದ ದುರ್ಬಳಕೆ. ಒಂದೇ ಕಾಮಗಾರಿಗೆ ಎರಡು ಕಡೆ ಹಣ ಪಾವತಿ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಸಚಿವರು ತನಿಖೆಗೆ ಆದೇಶಿಸಿದರು. ಸಾರ್ವಜನಿಕರ ತೆರಿಗೆ ಹಣವನ್ನು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಳ್ಳುವ ಅಧಿಕಾರಿಗಳು ಜೈಲು ಪಾಲಾಗಬೇಕಾಗುತ್ತದೆ ಎಂದು ಕೃಷ್ಣ ಭೈರೇಗೌಡರು ಖಡಕ್ ವಾರ್ನಿಂಗ್ ನೀಡಿದರು.
ಜವಾಬ್ದಾರಿಯಿಂದ ಕೆಲಸ ಮಾಡಿ ಇಲ್ಲವೇ ಮನೆಗೆ ಹೋಗಿ
ಅಧಿಕಾರಿಗಳ ಉಡಾಫೆ ವರ್ತನೆಗೆ ಅಂತ್ಯ ಹಾಡಲು ನಿರ್ಧರಿಸಿರುವ ಸಚಿವರು, ಇನ್ನು ಮುಂದೆ ಪ್ರತಿಯೊಂದು ಪೈಸೆಯ ಲೆಕ್ಕವನ್ನೂ ನೀಡಬೇಕಾಗುತ್ತದೆ ಎಂದು ಸೂಚಿಸಿದ್ದಾರೆ. ರಸ್ತೆಗಳು ಕನಿಷ್ಠ ಎಂಟು ವರ್ಷ ಬಾಳಿಕೆ ಬರಬೇಕು ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಕಠಿಣ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಅಧಿಕಾರಿಗಳ ಬೆವರಿಳಿಸಿದ್ದಾರೆ. ಈ ಸಭೆಯ ಮೂಲಕ ಬೆಂಗಳೂರು ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಅಧಿಕಾರಿ ವರ್ಗಕ್ಕೆ ರವಾನಿಸಿದ್ದಾರೆ.








