ಕೋವಿಡ್-19 ಹಿನ್ನೆಲೆ ಪುತ್ತೂರಿನಲ್ಲಿ ಪ್ರತಿ ಮನೆಗೆ ಉಚಿತ ರೋಗ ನಿರೋಧಕ ಮಾತ್ರೆ
ಪುತ್ತೂರು, ಜುಲೈ 19: ಪುತ್ತೂರು ತಾಲೂಕಿನಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಯುರ್ವೇದಿಕ್ ವಿಚಾರಗಳನ್ನು ಮುಂದಿಟ್ಟುಕೊಂಡು ಶಾಸಕ ಸಂಜೀವ್ ಮಠಂದೂರು ಅವರ ಮುಂದಾಳತ್ವದಲ್ಲಿ ಇಂದು ನಗರ ಸಭೆಯ ಮೂವತ್ತೊಂದು ವಾರ್ಡ್ ಗಳಿಗೆ ಡಾ. ಹರಿಕೃಷ್ಣ ಪಾಣಾಜೆಯವರು ಸಿದ್ಧ ಪಡಿಸಿರುವ ರೋಗ ನಿರೋಧಕ ಮಾತ್ರೆಗಳನ್ನು ವಿತರಣೆ ಮಾಡಲು ಚಾಲನೆ ನೀಡಲಾಗಿದೆ. ಆಯುರ್ವೇದಿಕ್ ಬಗ್ಗೆ ಜನಜಾಗೃತಿ ಮೂಡಿಸುವ ಮತ್ತು ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ನಗರಸಭಾ ವ್ಯಾಪ್ತಿಯ ಒಂದು ಸಾವಿರ ಮನೆಗಳಿಗೆ ಡಾ. ಹರಿಕೃಷ್ಣ ಪಾಣಾಜೆಯವರು ತಯಾರಿಸಿದ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಆಯುಷ್ ಕ್ವಾತ, ಆರೋಗ್ಯ ರಕ್ಷಕ್ ಮಾತ್ರೆಗಳು ಜನರಲ್ಲಿ ಇಮ್ಯುನಿಟಿ ಪವರ್ ಹೆಚ್ಚಿಸಿ, ಕೊರೊನಾ ಆತಂಕ ದೂರ ಮಾಡಬಲ್ಲದು ಎಂದು ಎಸ್.ಡಿಪಿ ರೆಮಿಡೀಸ್ ಮತ್ತು ಸಂಶೋಧನಾ ಕೇಂದ್ರ ಪುತ್ತೂರಿನ ಆಯುರ್ವೇದ ತಜ್ಞ ಡಾ.ಹರಿಕೃಷ್ಣ ಪಾಣಾಜೆ ಹೇಳಿದ್ದಾರೆ. ಶುಂಠಿ, ಒಳ್ಳೆ ಮೆಣಸು, ತುಳಸಿ ಮುಂತಾದ ಗಿಡಮೂಲಿಕೆಗಳನ್ನು ಬಳಸಿ ಈ ಮಾತ್ರೆಗಳನ್ನು ತಯಾರಿಸಲಾಗಿದ್ದು, ಆಯುಷ್ ಕ್ವಾತ ಮಾತ್ರೆಯನ್ನು ಬೆಳಗ್ಗೆ ಮತ್ತು ಆರೋಗ್ಯ ರಕ್ಷಕ್ ಮಾತ್ರೆಯನ್ನು ರಾತ್ರಿ ತಲಾ ಒಂದರಂತೆ ಒಂದು ತಿಂಗಳು ಅಥವಾ ಎರಡು ತಿಂಗಳು ಸೇವಿಸಲು ಸಲಹೆ ನೀಡಲಾಗಿದೆ. ಭಾರತ ಸರ್ಕಾರವು ಇದನ್ನು ಇಮ್ಯುನಿಟಿ ಹೆಚ್ಚಿಸಲು ಉತ್ತಮವಾದ ಮಾತ್ರೆ ಎಂದು ಪ್ರಮಾಣೀಕರಿಸಿದ್ದು, ಯಾವುದೇ ಭಯವಿಲ್ಲದೆ ಸೇವಿಸಬಹುದು ಎಂದು ಡಾ.ಹರಿಕೃಷ್ಣ ಪಾಣಾಜೆ ತಿಳಿಸಿದ್ದಾರೆ. ಸೋಮವಾರದಿಂದ ನಗರಸಭಾ ಸದಸ್ಯರ ಮುಖಾಂತರ ಮಾತ್ರೆಗಳ ಹಂಚಿಕೆ ಕಾರ್ಯಕ್ರಮ ನಡೆಯಲಿದೆ.








