ದೆಹಲಿ ಹಿಂಸಾಚಾರದ ವೇಳೆ ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್ ಶರ್ಮಾ ಸಾವಿಗೆ ಸಂಬಂಧ ಆಪ್ ಕೌನ್ಸಿಲರ್ ತಾಹಿರ್ ಹುಸೇನ್ ವಿರುದ್ಧ ಎಫ್‍ಐಆರ್ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಆಮ್ ಆದ್ಮಿ ಪಕ್ಷ ತಾಹಿರ್ ನನ್ನು ಪಕ್ಷದಿಂದ ಅಮಾನತು ಮಾಡಿದೆ.
ಅಂಕಿತ್ ಶರ್ಮಾ ಹತ್ಯೆಯ ಹಿಂದೆ ತಾಹಿರ್ ಕೈವಾಡ ಇದೆ ಎಂದು ಅವರ ತಂದೆ ರವೀಂದ್ರ ಶರ್ಮಾ ಆರೋಪಿಸಿದ್ದರು. ಹಾಗೇ ತಾಹಿರ್ ಮಾಲೀಕತ್ವದ ಕಟ್ಟಡದ ತಾರಸಿಯಿಂದ ಕಲ್ಲು ಮತ್ತು ಪೆಟ್ರೋಲ್ ಬಾಂಬ್‍ಗಳನ್ನು ಎಸೆಯಲಾಗಿದೆ ಎಂದು ಸ್ಥಳೀಯರೂ ಕೂಡ ಆರೋಪಿಸಿದ್ದರು. ಇತ್ತ, ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ದೆಹಲಿ ಹಿಂಸಾಚಾರದಲ್ಲಿ ತಾಹಿರ್ ಕೈವಾಡ ಇದೆ ಎಂದು ದೂಷಿಸಿದ್ದರು. ಜೊತೆಗೆ ತಾಹಿರ್ ನಿವಾಸದಲ್ಲಿ ಆಸಿಡ್ ತುಂಬಿದ ಬಾಟೆಲ್‍ಗಳು ಹಾಗೂ ಮಾರಕಾಸ್ತ್ರಗಳು ಪತ್ತೆಯಾದ ಹಿನ್ನೆಲೆ ತಾಹಿರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಗಲಭೆ ಪ್ರಕರಣ ದಾಖಲಿಸಲಾಗಿದೆ.
ಇತ್ತ, ತಾಹಿರ್ ವಿರುದ್ಧ ಆರೋಪಗಳು ಕೇಳಿಬಂದ ಹಿನ್ನೆಲೆ ಎಚ್ಚೆತ್ತ ಎಎಪಿ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಾಹಿರ್ ನನ್ನು ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿ ಗುರುವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.