ಈ ಬಾರಿ ವಿಧಾನಪರಿಷತ್ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ
ಆನೇಕಲ್, ಸ್ಟಿಂಗ್ ಆಪರೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸದೇ ಇದ್ದಲ್ಲಿ, ಇದನ್ನು ಮಾಡಿಸಿದ್ದು ಕಾಂಗ್ರೆಸ್ ನಾಯಕರೇ ಎಂಬುದು ಖಚಿತವಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ವಿಧಾನಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ಡ್ರೈವ್, ಸ್ಟಿಂಗ್ ಆಪರೇಶನ್ ಎಂದುಕೊಂಡು ಕರ್ನಾಟಕದ ರಾಜಕಾರಣದ ಮಾನವನ್ನು ಕಾಂಗ್ರೆಸ್ ಹರಾಜು ಹಾಕಿದೆ. ಇದು ಹೊಲಸು ರಾಜಕಾರಣವಾಗಿದ್ದು, ಇದು ಯಾರಿಗೂ ಶೋಭೆ ತರುವುದಿಲ್ಲ. ತೆಲಂಗಾಣ, ತಮಿಳುನಾಡು ರಾಜಕಾರಣ ನಮ್ಮಲ್ಲಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆವು. ಆದರೀಗ ಸಿಡಿ ಫ್ಯಾಕ್ಟರಿ, ಪೆನ್ ಡ್ರೈವ್ ಫ್ಯಾಕ್ಟರಿಯಿಂದಾಗಿ ಈ ರಾಜಕಾರಣವನ್ನು ನೋಡಲಾಗುತ್ತಿಲ್ಲ. ಮುಖ್ಯಮಂತ್ರಿ ಕೇವಲ ಹೇಳಿಕೆಗಳನ್ನು ನೀಡುವ ಬದಲು ಕೂಡಲೇ ತನಿಖೆ ಮಾಡಬೇಕು. ಈ ರಾಜ್ಯದಲ್ಲಿ ಗೃಹ ಸಚಿವರು ಇಲ್ಲವೇ? ಕೂಡಲೇ ಎಫ್ಐಆರ್ ದಾಖಲಿಸಿ, ನಂತರ ಯಾವ ತನಿಖೆಗೆ ನೀಡಬೇಕು ಎಂದು ತೀರ್ಮಾನಿಸಬೇಕು. ಸಚಿವ ಪ್ರಿಯಾಂಕ್ ಖರ್ಗೆ ಕೇವಲ ಆರ್ಎಸ್ಎಸ್ ಎನ್ನುತ್ತಾರೆ. ಆದರೆ ಸ್ವಯಂಪ್ರೇರಿತವಾಗಿ ತನಿಖೆ ಮಾಡುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ವೀಡಿಯೋ ಯಾರು ಹಂಚಿದ್ದಾರೆ ಎಂದು ತನಿಖೆಯಾಗಲಿ ಎಂದು ದೂರು ನೀಡಿದ್ದಾರೆ. ಈ ವಿಷಯವನ್ನು ತನಿಖೆ ಮಾಡಬೇಕು, ಇದರ ಹಿಂದೆ ಯಾವ ನಾಯಕ ಇದ್ದಾರೆ ಎಂದು ತನಿಖೆಯಾಗಬೇಕು. ಈ ವಿಷಯ ಆಚೆ ಬರಬೇಕಿದೆ. ಇಲ್ಲವಾದರೆ ಸಭ್ಯತೆ ಇಲ್ಲದ ರಾಜಕಾರಣವಾಗುತ್ತದೆ ಎಂದರು.
ಇದರ ತನಿಖೆಯನ್ನು ಮಾಡದಿದ್ದರೆ ರಾಜ್ಯದ ಮಾನ ಹರಾಜಾಗುತ್ತದೆ. ಸಿದ್ದರಾಮಯ್ಯನವರನ್ನು ಮುಗಿಸಬೇಕು, ಸರ್ವನಾಶ ಮಾಡಬೇಕು, ಅಹಿಂದ ರಾಜಕಾರಣ ಮಾಡಬಾರದು ಎಂಬ ಕಾರಣಕ್ಕೆ ಇದನ್ನು ಮಾಡಲಾಗಿದೆ. ಸರ್ಕಾರ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿದೆ. ಹತ್ತು ಸಚಿವರ ಮೇಲೆ ಆರೋಪವಿದ್ದು, ಎಲ್ಲ ಸಚಿವರು ನಾನಲ್ಲ ಎಂದು ಹೇಳಿಕೊಂಡು ಒದ್ದಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಬೆಂಬಲಿಗರು ಇದನ್ನು ಕಾಂಗ್ರೆಸ್ ನಾಯಕರೇ ಮಾಡಿಸಿದ್ದು ಎನ್ನುತ್ತಿದ್ದಾರೆ. ಎಫ್ಐಆರ್ ಮಾಡದೇ ಇದ್ದರೆ ಇದು ಖಚಿತವಾಗುತ್ತದೆ ಎಂದರು.
ಆನೇಕಲ್ನಲ್ಲಿ ಎನ್ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್ ಅವರ ಪರ ಪ್ರಚಾರ ನಡೆಸಿದ್ದು, ಇಲ್ಲಿ 1600 ಮತಗಳಿವೆ. ಈ ಬಾರಿ ಹೆಚ್ಚು ಒತ್ತು ನೀಡಿ ಪ್ರಚಾರ ಮಾಡಲಾಗಿದೆ. ಈಗಿನ ವಾತಾವರಣ ನೋಡಿದರೆ ನಾಲ್ಕು ಸ್ಥಾನಗಳನ್ನೂ ಬಿಜೆಪಿ ಗೆಲ್ಲಲಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಲ್ಲ ನಾಯಕರು ಉತ್ಸಾಹದಿಂದ ಪ್ರಚಾರ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೋರ್ಟ್ಗೆ ಹೋಗಿ ತಡೆಯಾಜ್ಞೆ ತರುವ ಸ್ಥಿತಿ ಬಂದಿದೆ. ಇದರಿಂದಾಗಿ ಅವರ ಸಮುದಾಯದವರು ಕಣ್ಣೀರು ಹಾಕಿದ್ದಾರೆ. ಕಾಂಗ್ರೆಸ್ ನಾಯಕರು ಅವರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದು, ಅದರಿಂದ ಸಮುದಾಯದವರು ನೋವು ಅನುಭವಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಸೋಲಲಿದೆ ಎಂದರು.
ಈ ಹಿಂದೆ ಪುಟ್ಟಣ್ಣ ಅವರನ್ನು ಈ ಕ್ಷೇತ್ರದಲ್ಲಿ ಗೆಲ್ಲಿಸಿದ್ದು, ಅವರು ಬಿಜೆಪಿ, ಜೆಡಿಎಸ್ಗೆ ಕೈ ಕೊಟ್ಟಿದ್ದಾರೆ. ರಂಗನಾಥ್ ಅವರು ವಕೀಲರ ಸಂಘದಲ್ಲಿದ್ದು ಉತ್ತಮ ಕೆಲಸ ಮಾಡಿದ್ದಾರೆ. ಅವರನ್ನು ಗೆಲ್ಲಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರ್ಕಾರದಿಂದ ಯಾವುದೇ ಅಭಿವೃದ್ಧಿ ನಡೆದಿಲ್ಲ. ಬರಗಾಲ ಬಂದರೂ ರೈತರಿಗೆ 2,500 ರೂ. ನೀಡಿದ್ದು, ಎತ್ತಿಗೆ ಮೂಗುದಾರ ಹಾಕಲು ಕೂಡ ಆಗುವುದಿಲ್ಲ. ರೈತರು ಹಣ ಸಂಗ್ರಹಿಸಿ ಸರ್ಕಾರಕ್ಕೆ ಕೊಡುತ್ತಿದ್ದಾರೆ. ವಿವಿಧ ಫಲಾನುಭವಿಗಳಿಗೆ ಪಿಂಚಣಿ ನೀಡಿಲ್ಲ. ಹಾಲಿನ ದರ ಏರಿಕೆ ಮಾಡುವ ಅಗತ್ಯವಿಲ್ಲದಿದ್ದರೂ ಮಾಡಲಾಗುತ್ತಿದೆ. ಕಾಂಗ್ರೆಸ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಹಾಲಿನ ಪ್ರೋತ್ಸಾಹಧನ ನೀಡಿದರೆ ಏರಿಕೆ ಮಾಡುವ ಅಗತ್ಯವೇ ಇಲ್ಲ ಎಂದರು.
ದೆಹಲಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರ ಮಾನ ಹರಾಜಾಗಿದೆ. ಇದು ಕನ್ನಡಿಗರಿಗೆ ಮಾಡಿದ ಅಪಮಾನ. ಒಬ್ಬ ಮುಖ್ಯಮಂತ್ರಿಯನ್ನು ರಾಹುಲ್ ಗಾಂಧಿ ಕತ್ತಿನ ಪಟ್ಟಿ ಹಿಡಿದು ತಳ್ಳಿದ್ದು, ಅವರು ರಾಜ್ಯಕ್ಕೆ ಪ್ರವೇಶ ಮಾಡುವ ಮುನ್ನ ಜನರ ಕ್ಷಮೆ ಯಾಚಿಸಬೇಕು. ಇಂತಹ ಇತಿಹಾಸವೇ ಎಲ್ಲೂ ಇಲ್ಲ ಎಂದರು.
ಬೆಂಗಳೂರನ್ನು ಐದು ಭಾಗ ಮಾಡಲಾಗಿದೆ. ಪೊಲೀಸ್ ಕಮಿಶನರ್ ವಿಭಾಗವನ್ನೂ ಐದು ಭಾಗ ಮಾಡಲಾಗಿದೆ. 110 ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ನಾವೇ ಸೇರಿಸಿದ್ದೆವು. ಅಲ್ಲಿಗೆ ಇನ್ನೂ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ. ಈಗ ಆನೇಕಲ್ನ್ನು ಪಾಲಿಕೆಗೆ ಸೇರಿಸಿದರೆ ಇನ್ನೂ ಕಷ್ಟವಾಗುತ್ತದೆ. ಇದನ್ನು ಕೇವಲ ರಿಯಲ್ ಎಸ್ಟೇಟ್ ಉದ್ದೇಶದಿಂದ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರು ರೈತರಿಂದ ಭೂಮಿ ಖರೀದಿಸಿದ್ದು, ಅದರ ಬೆಲೆ ಹೆಚ್ಚಿಸಿಕೊಳ್ಳಲು ಮಾಡಲಾಗುತ್ತಿದೆ. ಹೀಗಾದರೆ ಚುನಾವಣೆ ನಡೆಸಿ, ಜನಪ್ರತಿನಿಧಿಗಳು ಅಧಿಕಾರಕ್ಕೆ ಬರುವುದು ಯಾವಾಗ? ಈ ತೀರ್ಮಾನದಿಂದ ಸರ್ಕಾರ ಹಿಂದೆ ಸರಿಯಬೇಕು. ಚುನಾವಣೆ ಮುಗಿದ ಬಳಿಕ ಇದನ್ನು ಮಾಡಲಿ ಎಂದು ಒತ್ತಾಯಿಸಿದರು.







