ರಾಮನಗರ, ಗ್ಯಾರಂಟಿಗಳಿಗಾಗಿ ಎಲ್ಲ ಸೌಲಭ್ಯಗಳನ್ನು ಕಡಿತ ಮಾಡಿರುವ ಕಾಂಗ್ರೆಸ್ ಸರ್ಕಾರ, ಈಗ ಅಂಗವಿಕಲರ ಪಿಂಚಣಿ ಹಣಕ್ಕೂ ಕೈ ಹಾಕಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ವಿಕಲಚೇತನರು ಹಮ್ಮಿಕೊಂಡಿರುವ ವಿಧಾನಸೌಧ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಣ್ಣು, ಕೈ ಕಾಲು ಇಲ್ಲದ ಅಂಗವಿಕಲರು ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದರೆ ಅದು ಶೋಚನೀಯ. ಒಂದು ತಿಂಗಳಿಂದ ಅಂಗವಿಕಲರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಕನಿಷ್ಠ ವೇತನವೇ 18,000 ರೂ. ಇರುವಾಗ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಅಂಗವಿಕಲಕರಿಗ 10,000 ರೂ. ಮಾತ್ರ ನೀಡಲಾಗುತ್ತಿದೆ. ಐದು ತಿಂಗಳಿಂದ ಇವರ ಪಿಂಚಣಿ ಕೂಡ ನೀಡುತ್ತಿಲ್ಲ. ಅಂಗವಿಕಲರಿಗೆ ಆರೋಗ್ಯ ಸಮಸ್ಯೆ ಕೂಡ ಇದ್ದು, ಅದಕ್ಕಾಗಿ ಪಿಂಚಣಿ ನೀಡಲಾಗುತ್ತಿದೆ. ಈಗ ಊಟಕ್ಕೆ, ಚಿಕಿತ್ಸೆಗೆ ಅವರೇನು ಮಾಡಬೇಕು? ಪರಿಷ್ಕರಣೆ ಮಾಡಲು ಪಿಂಚಣಿ ನೀಡುವುದನ್ನು ನಿಲ್ಲಿಸುವ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಾಗಿ ಎಲ್ಲವನ್ನೂ ಸ್ಥಗಿತಗೊಳಿಸಿ ಭಿಕ್ಷುಕನಂತೆ ಆಗಿದೆ. ಈಗ ಅಂಗವಿಕಲರ ಹಣಕ್ಕೂ ಕೈ ಹಾಕಲಾಗಿದೆ. ಕಳೆದ ಐದು ತಿಂಗಳ ಪಿಂಚಣಿಯನ್ನು ಈ ಸರ್ಕಾರ ತಿಂದುಹಾಕಿದೆ. ಸಚಿವರು ಬಂದು ಭೇಟಿ ಮಾಡಿ ಭರವಸೆ ನೀಡುವವರೆಗೂ ಅವರ ಹೋರಾಟದೊಂದಿಗೆ ನಾವು ಕೈ ಜೋಡಿಸುತ್ತೇವೆ. ಅವರ ಕಣ್ಣೀರಿನಿಂದ ಸರ್ಕಾರಕ್ಕೆ ಶಾಪ ತಟ್ಟಲಿದೆ ಎಂದರು.
ರಾಜ್ಯದಲ್ಲಿ ಕಿತ್ತು ತಿನ್ನುವ ಬರಗಾಲವಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಿಗಮಗಳಿಗೆ ಹಣ ಲಭ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ಸ್ಟಿಂಗ್ ಆಪರೇಶನ್ ಬಗ್ಗೆ ಚರ್ಚೆ ನಡೆಯುತ್ತಿದೆ. ಮೊದಲೇ ಸಿದ್ದರಾಮಯ್ಯ ಸಂಕಷ್ಟದಲ್ಲಿದ್ದು ಅವರಿಗೆ ಇನ್ನಷ್ಟು ನೋವು ನೀಡಲಾಗುತ್ತಿದೆ. ಹೀಗೆಯೇ ಎಷ್ಟು ದಿನ ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ? ಸಿಎಂ ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಾತಾಡಿದ್ದಾರೆ. ಅಂದಮೇಲೆ ಗೃಹಸಚಿವರು ಈ ಕುರಿತು ಎಫ್ಐಆರ್ ದಾಖಲಿಸಿ ತನಿಖೆ ಮಾಡಿಸಬೇಕಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ ದೂರಿನಲ್ಲಿ ಏನೂ ಇಲ್ಲ. ಇದನ್ನು ಯಾರು ಮಾಡಿದರು ಎಂಬ ಅಂಶವೇ ಇಲ್ಲ. ವಿತರಣೆ ಮಾಡಿದವರ ವಿರುದ್ಧ ಮಾತ್ರ ದೂರು ನೀಡಲಾಗಿದೆ ಎಂದರು.
ಈ ಸ್ಟಿಂಗ್ ಆಪರೇಶನ್ ನಡೆಸಲು 10-15 ಕೋಟಿ ರೂ. ಖರ್ಚಾಗಿದೆ. ಈ ಕಪ್ಪು ಹಣ ಎಲ್ಲಿಂದ ಬಂದಿದೆ? ಯಾರ ಹಣವನ್ನು ಲೂಟಿ ಮಾಡಲಾಗಿದೆ? ಈ ಎಲ್ಲ ವಿಷಯಗಳು ಬಹಿರಂಗವಾಗಲು ತನಿಖೆ ನಡೆಯಬೇಕು. ಇದು ರಾಜಕೀಯ ವ್ಯಭಿಚಾರವಾಗಿದ್ದು, ತನಿಖೆಯಿಂದ ಎಲ್ಲ ಸತ್ಯ ಹೊರಗೆ ಬರಬೇಕು. ಇಲ್ಲವಾದರೆ ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಮೊದಲಾದವರಿಗೆ ಅಪಮಾನ ಮಾಡಿದಂತಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳು ಹುಳ ಬಿಟ್ಟಿದ್ದರು. ಅವರ ಬಳಿಯೇ ಗುಪ್ತಚರ ವಿಭಾಗವಿದೆ. ಆದ್ದರಿಂದ ಆ ಬಗ್ಗೆ ಕಾಯದೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಬರಗಾಲದ ವಿಷಯದ ಬಗ್ಗೆ ಚರ್ಚೆ ಮಾಡಿದರೂ ನಾವು ಚರ್ಚೆಯೇ ಮಾಡಿಲ್ಲ ಎಂದು ಕಾಂಗ್ರೆಸ್ನವರು ಹೇಳಿದ್ದರು. ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದರೆ ಬರಗಾಲದ ಬಗ್ಗೆ ಚರ್ಚೆ ಮಾಡಿ ಎಂದರು. ಬರಗಾಲದ ಬಗ್ಗೆ ಚರ್ಚೆ ಮಾಡಲು ನಾವು ಮುಂದಾದರೆ, ಸ್ಟಿಂಗ್ ಆಪರೇಶನ್ ಬಗ್ಗೆ ಹೇಳುತ್ತಿದ್ದಾರೆ. ಬರಗಾಲಕ್ಕೆ ಪರಿಹಾರ ನೀಡಲು ಯೋಗ್ಯತೆ ಇಲ್ಲದ ಈ ದಿವಾಳಿ ಸರ್ಕಾರ, ವಿಷಯಾಂತರ ಮಾಡಲು ಸ್ಟಿಂಗ್ ಆಪರೇಶನ್ ಬಗ್ಗೆ ಮಾತಾಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲೇ ಒಗ್ಗಟ್ಟಿಲ್ಲ. ಈ ವಿಚಾರದಲ್ಲಿ ಕೆಲವರು ಸಿದ್ದರಾಮಯ್ಯನವರ ಪರ, ವಿರೋಧ ಇದ್ದಾರೆ. ಕೆಲವರು ತಟಸ್ಥರಾಗಿದ್ದಾರೆ. ಮಾಡಿಸಿದವರು ಯಾರೆಂಬ ಸತ್ಯ ಹೊರಗೆ ಬಂದರೆ ಕೋಲಾಹಲವಾಗಿ ಕಾಂಗ್ರೆಸ್ ಪಕ್ಷದ ಮೇಲೆ ಜನರ ನಂಬಿಕೆ ಹೊರಟುಹೋಗುತ್ತದೆ. ಜನರು ಇಡೀ ಪಕ್ಷವನ್ನು ಓಡಿಸಿಬಿಡುತ್ತಾರೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಈಗ ರಾಜಕೀಯದ ಸಂಧ್ಯಾಕಾಲದಲ್ಲಿದ್ದಾರೆ. ಅವರಿಗೆ ಇಂತಹ ಸ್ಥಿತಿ ಬರಬಾರದಿತ್ತು. ರಾಜಕೀಯವಾಗಿ ಫೈಟ್ ಮಾಡಬೇಕೆ ಹೊರತು, ಈ ರೀತಿ ಮಾಡಬಾರದು ಎಂದರು.




