ಚೆನ್ನೈ: ತಮಿಳುನಾಡು ಬಿಜೆಪಿ ಅಂಗಳದಲ್ಲಿ ಈಗ ರಾಜಕೀಯ ಸಮರ ಸ್ಫೋಟಗೊಂಡಿದೆ. ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಪ್ರತಿಭಟನೆಯನ್ನು ಬೆಂಬಲಿಸಿ ಕೇಂದ್ರ ಸರ್ಕಾರದ ಧೋರಣೆಯನ್ನು ಪ್ರಶ್ನಿಸಿದ್ದ ಕೆ. ಅಣ್ಣಾಮಲೈ ವಿರುದ್ಧ, ಬಿಜೆಪಿಯ ಹಿರಿಯ ನಾಯಕಿ ಮತ್ತು ಮಾಜಿ ರಾಜ್ಯಪಾಲೆ ಡಾ. ತಮಿಳಿಸೈ ಸೌಂದರರಾಜನ್ ಅತ್ಯಂತ ತೀಕ್ಷ್ಣವಾದ ಶಬ್ದಪ್ರಹಾರ ನಡೆಸಿದ್ದಾರೆ. ಅಣ್ಣಾಮಲೈ ಅವರ ಸಿದ್ಧಾಂತ ಮತ್ತು ನಾಯಕತ್ವವನ್ನೇ ಪರೋಕ್ಷವಾಗಿ ಪ್ರಶ್ನಿಸಿರುವ ತಮಿಳಿಸೈ, ಅವರನ್ನು ಜಿರಳೆಗಳಿಗೆ ಹೋಲಿಸುವ ಮೂಲಕ ಹೊಸ ರಾಜಕೀಯ ಕಿಚ್ಚು ಹಚ್ಚಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದೆ ಪೋಸ್ಟ್ ಮಾಡಿರುವ ತಮಿಳಿಸೈ ಸೌಂದರರಾಜನ್, ಬಿಜೆಪಿಯನ್ನು ಒಂದು ಅಚಲವಾದ ಪರ್ವತಕ್ಕೆ ಹೋಲಿಸಿದ್ದಾರೆ. ಗಾಳಿ ಜೋರಾಗಿ ಬೀಸಬಹುದು, ದಿಕ್ಕನ್ನು ಬದಲಿಸಬಹುದು, ಆದರೆ ಪರ್ವತವನ್ನು ಅಲುಗಾಡಿಸಲು ಅದಕ್ಕೆ ಸಾಧ್ಯವೇ? ಪರ್ವತವು ಪರ್ವತವಾಗಿಯೇ ಉಳಿಯುತ್ತದೆ, ಅದು ಎಂದಿಗೂ ಮರಳಿನ ದಿಬ್ಬವಾಗುವುದಿಲ್ಲ. ಆದರೆ ತಾವೇ ಸಿಂಹ ಎಂದು ಗರ್ಜಿಸುತ್ತಿದ್ದವರು ಈಗ ತಮಿಳುನಾಡಿನಲ್ಲಿ ಸಣ್ಣ ಜಿರಳೆಗಳಂತೆ ಅಂದರೆ ಕಾಕ್ರೋಚ್ ಗಳಂತೆ ಬಣ್ಣ ಬದಲಾಯಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದು ಅಣ್ಣಾಮಲೈ ಅವರು ಸಿಜೆಪಿ ಪ್ರತಿಭಟನೆಯನ್ನು ಬೆಂಬಲಿಸಿದ್ದಕ್ಕೆ ನೀಡಿದ ನೇರ ಕೌಂಟರ್ ಎಂದು ವಿಶ್ಲೇಷಿಸಲಾಗುತ್ತಿದೆ.
ತಮಿಳಿಸೈ ಅವರ ಈ ಟ್ವೀಟ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾಮಲೈ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ನೀವು ವಿದ್ಯಾವಂತರಾದರೂ ಚುನಾವಣೆಯಲ್ಲಿ ಸರಿಯಾದ ಹಾದಿ ತುಳಿಯದೆ ಸೋಲನ್ನಪ್ಪಿದ್ದೀರಿ, ಇಂತಹ ಸಂದರ್ಭದಲ್ಲಿ ಇನ್ನೊಬ್ಬರಿಗೆ ಬುದ್ಧಿ ಹೇಳುವುದು ಸರಿಯಲ್ಲ ಎಂದು ಕೆಲವರು ಕುಟುಕಿದ್ದಾರೆ. ಇನ್ನು ಕೆಲವರು, ಸಿಂಹವನ್ನು ಟೀಕಿಸಿದ ತಕ್ಷಣ ಅದರ ಗಾಂಭೀರ್ಯ ಕಡಿಮೆಯಾಗುವುದಿಲ್ಲ. ಕಾಲ ಬದಲಾದಂತೆ ಯಾರು ನೈಜ ನಾಯಕ ಮತ್ತು ಯಾರು ಮುಖವಾಡ ಧರಿಸಿದ್ದಾರೆ ಎಂಬುದು ತಿಳಿಯಲಿದೆ ಎಂದು ಅಣ್ಣಾಮಲೈ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಅಣ್ಣಾಮಲೈ ಅವರು ಸಿಜೆಪಿ ನಾಯಕರ ಬಂಧನವನ್ನು ದೆಹಲಿ ಪೊಲೀಸರ ದರ್ಪ ಎಂದು ಕರೆದಿದ್ದೇ ತಮಿಳುನಾಡು ಬಿಜೆಪಿಯ ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.








