* ಭಾರತದ ಇದುವರೆಗಿನ ಅತಿ ದೊಡ್ಡ ಐಪಿಒ (₹30,213 ಕೋಟಿ)
* ಅತಿ ಕಡಿಮೆ ಸಮಯದಲ್ಲಿ ಸಂಪೂರ್ಣ ಭರ್ತಿಯಾದ ಐಪಿಒ
* ಮೊದಲ ದಿನವೇ ₹6,900 ಕೋಟಿಗೂ ಅಧಿಕ ಹೂಡಿಕೆಯೊಂದಿಗೆ ಸಾರ್ವಕಾಲಿಕ ದಾಖಲೆ ಬರೆದ ಚಿಲ್ಲರೆ (ರೀಟೇಲ್) ಹೂಡಿಕೆದಾರರು
* ಕ್ಯೂ ಐಬಿ, ಎಚ್ ಎನ್ ಐ ನೌಕರರು ಮತ್ತು ಷೇರುದಾರರ ಎಲ್ಲಾ ವಿಭಾಗಗಳೂ ನಿರೀಕ್ಷೆಗಿಂತ ಹೆಚ್ಚು ಭರ್ತಿ
* ಆಂಕರ್ ಹೂಡಿಕೆದಾರರಿಂದ 30 ಪಟ್ಟು ಹೆಚ್ಚು ಬೇಡಿಕೆ
* ಆಂಕರ್ ಬುಕ್ ಸೇರಿ ಈ ಐಪಿಒಗೆ ಒಟ್ಟು ಬೇಡಿಕೆ ₹3.2 ಲಕ್ಷ ಕೋಟಿ ತಲುಪಿದೆ
ಮುಂಬಯಿ: ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿರುವ, ದೇಶದ ಅತಿ ದೊಡ್ಡ ಸಾರ್ವಜನಿಕ ಕೊಡುಗೆಯಾದ ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ (ಜೆಪಿಎಲ್) ಐಪಿಒ ತನ್ನ ಮೊದಲ ದಿನವೇ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಸಾಂಸ್ಥಿಕ ಹೂಡಿಕೆದಾರರ ಭಾರಿ ಬೇಡಿಕೆಯಿಂದಾಗಿ ಇದು 3.2 ಪಟ್ಟು ಅಧಿಕ ಭರ್ತಿಯಾಗಿದೆ.
ಬಿಡ್ಡಿಂಗ್ ಶುರುವಾದ ಕೇವಲ 100 ನಿಮಿಷಗಳಲ್ಲಿಯೇ 100% ಪೂರ್ಣಗೊಂಡಿದ್ದು, ಇದು ದಲಾಲ್ ಸ್ಟ್ರೀಟ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಸಂಪೂರ್ಣ ಭರ್ತಿಯಾದ ಮೆಗಾ IPO ಎನಿಸಿದೆ. ಅರ್ಹ ಸಾಂಸ್ಥಿಕ ಹೂಡಿಕೆದಾರರ (QIB) ವಿಭಾಗದಲ್ಲಿ ಮೊದಲ ದಿನದ ಅಂತ್ಯಕ್ಕೆ 9.42 ಪಟ್ಟು ಹೆಚ್ಚು ಬಿಡ್ಗಳು ಬಂದಿವೆ. ಜಾಗತಿಕ ಮತ್ತು ದೇಶೀಯ ಮ್ಯೂಚುಯಲ್ ಫಂಡ್ಗಳು ಮುಗಿಬಿದ್ದ ಪರಿಣಾಮ, ಆಂಕರ್ ಹೂಡಿಕೆದಾರರ ವಿಭಾಗದಲ್ಲೂ 30 ಪಟ್ಟು ಅಧಿಕ ಬೇಡಿಕೆ ಕಂಡುಬಂದಿತ್ತು. ಚಿಲ್ಲರೆ ಹೂಡಿಕೆದಾರರ ವಿಭಾಗವೊಂದರಲ್ಲೇ ₹6,900 ಕೋಟಿಗೂ ಅಧಿಕ ಬಿಡ್ಗಳು ಬಂದಿದ್ದು, ಭಾರತದ ಮಾರುಕಟ್ಟೆ ಇತಿಹಾಸದಲ್ಲಿ ಮೊದಲ ದಿನವೇ ಬಂದ ಅತಿ ದೊಡ್ಡ ಚಿಲ್ಲರೆ ಹೂಡಿಕೆ ಇದಾಗಿದೆ.
ಇತರ ದೊಡ್ಡ IPOಗಳಿಗಿಂತ ಜಿಯೋ ವೇಗ ಹೇಗಿದೆ?
ಇತರ ಮೆಗಾ IPOಗಳಿಗೆ ಹೋಲಿಸಿದರೆ ಜಿಯೋ ಪ್ಲಾಟ್ಫಾರ್ಮ್ಸ್ ತೋರಿಸಿದ ವೇಗ ಅಸಾಧಾರಣವಾಗಿದೆ.
ಜಿಯೋ ಪ್ಲಾಟ್ಫಾರ್ಮ್ಸ್: 100 ನಿಮಿಷಗಳಲ್ಲಿ 100% ಭರ್ತಿ.
ಬಜಾಜ್ ಹೌಸಿಂಗ್ ಫೈನಾನ್ಸ್: ಮೊದಲ ದಿನ ಮಧ್ಯಾಹ್ನ 2:00 ಗಂಟೆಗೆ ಪೂರ್ಣಗೊಂಡಿತ್ತು.
ಎಲ್ಜಿ ಎಲೆಕ್ಟ್ರಾನಿಕ್ಸ್: ಮೊದಲ ದಿನದ ಕೊನೆಗೆ ಪೂರ್ಣಗೊಂಡಿತು.
ಹುಂಡೈ ಮೋಟರ್ ಇಂಡಿಯಾ: ಮೊದಲ ದಿನದ ಕೊನೆಗೆ ಕೇವಲ 18% ಮಾತ್ರ ಭರ್ತಿಯಾಗಿತ್ತು.
ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ, ಹುಂಡೈ ಮತ್ತು ಎಲ್ಜಿ ಕಂಪನಿಗಳ IPOಗಳು ‘ಆಫರ್ ಫಾರ್ ಸೇಲ್’ (ಒಎಫ್ ಎಸ್) ಆಗಿದ್ದವು (ಅಂದರೆ ಹಣ ವಿದೇಶಿ ಮಾತೃಸಂಸ್ಥೆಗೆ ಹೋಗುತ್ತದೆ). ಆದರೆ ಜಿಯೋ ಪ್ಲಾಟ್ಫಾರ್ಮ್ಸ್ನದ್ದು ಸಂಪೂರ್ಣವಾಗಿ ಹೊಸ ಷೇರುಗಳ ಬಿಡುಗಡೆಯಾಗಿದೆ (100% ಹೊಸ ಬಿಡುಗಡೆ). ಇಲ್ಲಿ ಬರುವ ಪ್ರತಿಯೊಂದು ರೂಪಾಯಿಯೂ ಕಂಪನಿಯ ಅಭಿವೃದ್ಧಿಗೆ, ಅಂದರೆ ಮುಂದಿನ ತಲೆಮಾರಿನ ಡಿಜಿಟಲ್ ನೆಟ್ವರ್ಕ್, ಕ್ಲೌಡ್ ತಂತ್ರಜ್ಞಾನ ಮತ್ತು AI ಪ್ಲಾಟ್ಫಾರ್ಮ್ಗಳ ವಿಸ್ತರಣೆಗೆ ಬಳಕೆಯಾಗಲಿದೆ.
ಮುಖ್ಯ ದಿನಾಂಕಗಳು:
IPO ಮುಕ್ತಾಯ : ಶುಕ್ರವಾರ, ಅಕ್ಟೋಬರ್ 23, 2026
ಷೇರು ಹಂಚಿಕೆ : ಸೋಮವಾರ, ಅಕ್ಟೋಬರ್ 26, 2026
ಡಿಮ್ಯಾಟ್ ಖಾತೆಗೆ ಜಮಾ : ಮಂಗಳವಾರ, ಅಕ್ಟೋಬರ್ 27, 2026
ಮಾರುಕಟ್ಟೆಯಲ್ಲಿ ಲಿಸ್ಟಿಂಗ್ : ಬುಧವಾರ, ಅಕ್ಟೋಬರ್ 28, 2026 (ಬಿಎಸ್ ಇ ಮತ್ತು ಎನ್ ಎಸ್ ಇ)
ಇನ್ನು ಎರಡು ದಿನಗಳ ಬಿಡ್ಡಿಂಗ್ ಬಾಕಿ ಇರುವುದರಿಂದ ಒಟ್ಟು ಹೂಡಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಲಿಸ್ಟಿಂಗ್ ಮೂಲಕ ಜಿಯೋ ಪ್ಲಾಟ್ಫಾರ್ಮ್ಸ್ ಭಾರತದ ಅಗ್ರ 5 ಅತ್ಯಮೂಲ್ಯ ಕಂಪನಿಗಳ ಸಾಲಿಗೆ ಸೇರಲಿದೆ ಎಂದು ತಜ್ಞರು ತಿಳಿಸಿದ್ದಾರೆ.








