ಮಂಗಳೂರು:ರಾಜ್ಯದಲ್ಲಿ ಲಕ್ಷಾಂತರ ಬಾಂಗ್ಲಾದೇಶಿಗರು ಮತ್ತು ಪಾಕಿಸ್ತಾನಿಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದವರು ಈಗ ಎಲ್ಲಿದ್ದಾರೆ? ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ (ಎಸ್ಐಆರ್) ಅಂತಿಮ ವರದಿಯಲ್ಲಿ ಪತ್ತೆಯಾಗಿದ್ದು ಕೇವಲ ಇಬ್ಬರು ಮಹಿಳೆಯರು. ಆ ಲಕ್ಷಾಂತರ ನುಸುಳುಕೋರರನ್ನು ಈಗಲಾದರೂ ಜನರಿಗೆ ತೋರಿಸಿ ಎಂದು ಹಿರಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರಿಗೆ ತೀಕ್ಷ್ಣ ಸವಾಲು ಹಾಕಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಾಗಿರುವ ಲೋಪದೋಷಗಳ ಕುರಿತು ದತ್ತಾಂಶಗಳ ಸಮೇತ ವಾಗ್ದಾಳಿ ನಡೆಸಿದ ಅವರು, ಅಧಿಕಾರಸ್ಥರ ಸುಳ್ಳು ಭಾಷಣಗಳು ಮತ್ತು ಅದಕ್ಕೆ ಬಲಿಯಾಗುತ್ತಿರುವ ಸಾರ್ವಜನಿಕರ ಹಿತಾಸಕ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಬಾಂಗ್ಲಾ ನುಸುಳುಕೋರರ ಹೆಸರಲ್ಲಿ ಬ್ರೈನ್ವಾಶ್
ದಕ್ಷಿಣ ಕನ್ನಡದ ಬಿಜೆಪಿ ನಾಯಕರು ಕರ್ನಾಟಕಕ್ಕೆ ಲಕ್ಷಾಂತರ ಅಕ್ರಮ ನುಸುಳುಕೋರರು ಬಂದಿದ್ದಾರೆ ಎಂದು ಹಾದಿಬೀದಿಯಲ್ಲಿ ಭಾಷಣ ಮಾಡುತ್ತಾ ಎಸ್ಐಆರ್ ಅಗತ್ಯವಿದೆ ಎಂದು ಜನರನ್ನು ನಂಬಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ನುಸುಳುಕೋರರ ಪಟ್ಟಿ ಕೇಳಿದಾಗ ಚುನಾವಣಾ ಆಯೋಗ ನೀಡಿದ ವರದಿಯಲ್ಲಿ ಕೇವಲ ಇಬ್ಬರು ಮಹಿಳೆಯರು ಮಾತ್ರ ಪತ್ತೆಯಾಗಿದ್ದಾರೆ. ಇನ್ನುಳಿದವರು ನೇಪಾಳಿ ಸೆಕ್ಯುರಿಟಿ ಗಾರ್ಡ್ಗಳು ಹಾಗೂ ಶೈಕ್ಷಣಿಕ ಕೆಲಸಕ್ಕೆ ಬಂದ ಪಾಶ್ಚಿಮಾತ್ಯ ಪ್ರಜೆಗಳು. ಬರೀ ಇಬ್ಬರಿಗಾಗಿ ಇಡೀ ರಾಜ್ಯದ ಜನರಲ್ಲಿ ದ್ವೇಷ ಬಿತ್ತಿ, ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಪೋಲು ಮಾಡಿದ್ದಕ್ಕೆ ಉತ್ತರಿಸುವವರು ಯಾರು ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.
ಒಂದು ಕೋಟಿ ಮತದಾರರ ಹಕ್ಕು ಕಸಿಯುವ ಹುನ್ನಾರ?
ಕರ್ನಾಟಕದಲ್ಲಿ ನಡೆದ ಎಸ್ಐಆರ್ ಪ್ರಕ್ರಿಯೆಯು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಅಕ್ರಮ ಎಂದು ಅವರು ಆಪಾದಿಸಿದರು. “ಮ್ಯಾಪಿಂಗ್ ಇಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಸುಮಾರು 98 ಲಕ್ಷದಿಂದ 1 ಕೋಟಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸತ್ತವರು ಮತ್ತು ಡಬಲ್ ಎಂಟ್ರಿಗಳನ್ನು ಹೊರತುಪಡಿಸಿದರೂ, ಇಂದಿಗೂ 70 ಲಕ್ಷಕ್ಕೂ ಅಧಿಕ ಜೀವಂತ ಮತದಾರರು ತಮ್ಮ ಹಕ್ಕು ಕಳೆದುಕೊಂಡಿದ್ದಾರೆ. ಬೆಂಗಳೂರಿನಂತಹ ನಗರದಲ್ಲಿ ಮತದಾರರ ಸಂಖ್ಯೆ ಕೇವಲ 53 ಲಕ್ಷ ಎಂದು ತೋರಿಸುತ್ತಿರುವುದು ಹಾಸ್ಯಾಸ್ಪದ. ಹಾಗಿದ್ದರೆ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವ್ಯಯಿಸಿ ರಸ್ತೆ, ಬಸ್ಗಳಂತಹ ಸೌಲಭ್ಯಗಳನ್ನು ಯಾರಿಗೆಂದು ಒದಗಿಸುತ್ತಿದೆ?” ಎಂದು ಅವರು ತೀವ್ರವಾಗಿ ಲೇವಡಿ ಮಾಡಿದರು.
ನನ್ನ ಮತದಾನದ ಹಕ್ಕನ್ನೇ ಕಸಿದಿದ್ದಾರೆ
ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡ ಅವರು, “ನನ್ನ ಹೆಸರೂ ಕೂಡ ಶಿಫ್ಟೆಡ್ ಎಂಬ ಕಾರಣಕ್ಕೆ ಪಟ್ಟಿಯಿಂದ ನಾಪತ್ತೆಯಾಗಿದೆ. ನನಗಾಗಿ ಸೃಷ್ಟಿಸಿರುವ ಸುಳ್ಳು ಆರೋಪಗಳಿಗೆ ಹೈಕೋರ್ಟ್ ಉತ್ತರ ಕೇಳುತ್ತಿದೆ. ನಾನು ಫಾರಂ 6 ಅನ್ನು ತುಂಬುವುದಿಲ್ಲ. ಏಕೆಂದರೆ ನಾನು ಹೊಸ ಮತದಾರನಲ್ಲ. ಫಾರಂ 6 ತುಂಬುವುದೆಂದರೆ ನಾನು ಈ ಹಿಂದೆ ಎಲ್ಲೂ ಮತದಾನ ಮಾಡಿಲ್ಲ ಎಂದು ಸುಳ್ಳು ಸಹಿ ಹಾಕಿದಂತೆ. ಹಳೆ ಮತದಾರರಿಗೆ ಫಾರಂ 8 ನೀಡುವ ಬದಲಾಗಿ ಜನರನ್ನು ಗೊಂದಲಕ್ಕೆ ದೂಡಲಾಗುತ್ತಿದೆ” ಎಂದು ಕಿಡಿಕಾರಿದರು.
ದಕ್ಷಿಣ ಕನ್ನಡದ ಜನರನ್ನು ಮಂಗ ಮಾಡಲಾಗುತ್ತಿದೆ
ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ, ಶಿಕ್ಷಣ ಮತ್ತು ಸೌಹಾರ್ದತೆ ಕೆಡಲು ಕಾರಣವಾಗಿರುವ ರಾಜಕೀಯ ಪಕ್ಷಗಳ ಬಗ್ಗೆ ಶೀಘ್ರವೇ ದತ್ತಾಂಶಗಳ ಸಮೇತ ವರದಿ ಬಿಡುಗಡೆ ಮಾಡುವುದಾಗಿ ತಿಳಿಸಿದ ಅವರು, “ಜಿಲ್ಲೆಯ ಯುವಕರು ಈ ಸುಳ್ಳು ಆಲೋಚನೆಗಳಿಂದ ಹೊರಬರಬೇಕು. ನಾವು ದೇಶವನ್ನು ಕಟ್ಟುವ ಕೆಲಸ ಮಾಡಬೇಕೇ ಹೊರತು ಕೇವಲ ರಾಜಕೀಯ ಪಕ್ಷಗಳನ್ನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಾಂಧಿ ಮಾರ್ಗದಲ್ಲೇ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದರು.








