ಕೋಲಾರ, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮಾಡದೆ ಎಲ್ಲ ಕಡೆ ಸೋಲುತ್ತಿದೆ. ಆದರೂ ಪ್ರಜಾಪ್ರಭುತ್ವವನ್ನು ಹರಣ ಮಾಡಲು ಇವಿಎಂ, ಎಸ್‌ಐಆರ್ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ವತಿಯಿಂದ ಆರಂಭವಾದ ಪ್ರಜಾಪ್ರಭುತ್ವ ಉಳಿಸಿ ಆಂದೋಲನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಅಲ್ಲೋಲಕಲ್ಲೋಲ ಸೃಷಿಸಬೇಕೆಂದು ಕಾಂಗ್ರೆಸ್, ಜಿರಳೆ ಪಾರ್ಟಿ ಹಾಗೂ ಆಮ್ ಆದ್ಮಿ ಪಾರ್ಟಿ ತೀರ್ಮಾನ ಮಾಡಿದೆ. ಅದಕ್ಕಾಗಿ ಪ್ರಜಾಪ್ರಭುತ್ವವನ್ನು ಹರಣ ಮಾಡಿ ಅಧಿಕಾರ ಪಡೆಯಲು ಮುಂದಾಗಿದ್ದು, ಇದರಿಂದ ಯಾವುದೇ ಲಾಭವಾಗುವುದಿಲ್ಲ. ಇವಿಎಂನಿಂದ ಗೆದ್ದಾಗ ಸುಮ್ಮನಿದ್ದು, ಸೋತಾಗ ಇವಿಎಂ ಸರಿ ಇಲ್ಲ ಎಂದು ಹೇಳುವುದು ಕಾಂಗ್ರೆಸ್‌ನ ಚಾಳಿಯಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ವೋಟಿಂಗ್ ಯಂತ್ರದ ವ್ಯವಸ್ಥೆ ತಂದಿದ್ದರು. ರಾಜ್ಯದಲ್ಲಿ ಇಂದು ಚುನಾವಣೆ ನಡೆದರೂ ಕಾಂಗ್ರೆಸ್ ಸಂಪೂರ್ಣವಾಗಿ ಸೋಲುತ್ತದೆ. ಒಂದು ಬಾಂಡ್ಲಿ ಡಾಂಬರನ್ನು ರಸ್ತೆಗೆ ಹಾಕುವಷ್ಟೂ ಹಣ ಉಳಿದಿಲ್ಲ. ಇದರಿಂದಾಗಿ ಕಾಂಗ್ರೆಸ್ ಸೋಲುತ್ತದೆಯೇ ಹೊರತು, ಇದಕ್ಕೂ ಇವಿಎಂಗೂ ಸಂಬಂಧವಿಲ್ಲ. ಆದ್ದರಿಂದ ಕಾಂಗ್ರೆಸ್ ಹೋರಾಟಕ್ಕೆ ವಿರುದ್ಧವಾಗಿ ನಾವು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ಮಾಡುತ್ತಿದ್ದೇವೆ ಎಂದರು.
ಹಾಲಿನ ದರ ಏರಿಕೆ
ಹಾಲಿನ ಪ್ರೋತ್ಸಾಹಧನವನ್ನು 7 ರೂ. ಗೆ ಏರಿಸುವುದಾಗಿ ಹೇಳಿದ ಕಾಂಗ್ರೆಸ್ ಈಗ ಕೈ ಕೊಟ್ಟಿದೆ. ನಾಲ್ಕು ಬಾರಿ ಹಾಲಿನ ದರ ಏರಿಸಲಾಗಿದೆ. ಸಿದ್ದರಾಮಯ್ಯ ಮೂರು ಬಾರಿ ಮಾಡಿದರೆ ಸಿಎಂ ಡಿ.ಕೆ.ಶಿವಕುಮಾರ್ ಒಂದೇ ಬಾರಿಗೆ 8 ರೂ. ಹೆಚ್ಚಿಸಿದ್ದಾರೆ. ಮೊಸರಿನ ದರ ಆಕಾಶಕ್ಕೇರಿದೆ. ಈಗ ಮತ್ತೆ ಕಡಿಮೆ ಮಾಡುತ್ತೇನೆ ಎಂದಿದ್ದಾರೆ. 14 ರೂ ಹೆಚ್ಚು ಮಾಡಿ 2 ರೂ. ಇಳಿಸುತ್ತೇನೆ ಎಂದಿದ್ದಾರೆ. ಉತ್ತರ ಪ್ರದೇಶ ಮೊದಲಾದ ರಾಜ್ಯಗಳ ಚುನಾವಣೆಗೆ ಬಳಸಲು ಇಲ್ಲಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂದರು.
ಇದರ ಪರಿಣಾಮ ಬೇರೆ ರಾಜ್ಯಗಳ ಹಾಲು, ಮೊಸರಿಗೆ ಬೇಡಿಕೆ ಹೆಚ್ಚಲಿದೆ. ಕೆಎಂಎಫ್ ಲಾಭದಲ್ಲಿದೆ ಎಂದಮೇಲೆ ಬೆಲೆ ಏರಿಕೆ ಮಾಡಿದ್ದು ಏಕೆ? ಸರ್ಕಾರದಿಂದಲೇ ಪ್ರೋತ್ಸಾಹಧನ ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇದರ ಜೊತೆಗೆ ಬಸ್ ದರ ಕೂಡ ಏರಿಕೆಯಾಗಲಿದೆ. ಈ ದೀಪಾವಳಿಗೆ ಯಾರೂ ಸಿಹಿ ತಿನ್ನದಂತೆ ಮಾಡಿ ಕಹಿಯಾದ ಕೊಡುಗೆಗಳನ್ನು ನೀಡಿದ್ದಾರೆ. ಜನರು ಸಂಭ್ರಮದಿಂದ ಹಬ್ಬ ಆಚರಣೆ ಮಾಡಲು ಆಗುವುದಿಲ್ಲ ಎಂದರು.
ಸಿದ್ದರಾಮಯ್ಯಗೆ ಅಪಮಾನ
ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ಟಿಂಗ್ ಆಪರೇಶನ್ ವೀಡಿಯೋ ಹಿಂದೆಯೇ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕರೇ ಅವರಿಗೆ ಬೆನ್ನಿಗೆ ಚೂರಿ ಹಾಕಿದ್ದಾರೆ. ಇದರಿಂದ ಬೇಸರಗೊಂಡ ಸಿದ್ದರಾಮಯ್ಯ ರಾಹುಲ್ ಗಾಂಧಿಗೆ ದೂರು ಸಲ್ಲಿಸಿದ್ದಾರೆ. ವೀಡಿಯೋ ಮಾಡಿದವರನ್ನು ಪತ್ತೆ ಮಾಡುವುದು ಬಿಟ್ಟು, ಹಂಚಿದವರನ್ನು ಪತ್ತೆ ಮಾಡುತ್ತಿದ್ದಾರೆ. ಇದರ ಹಿಂದೆ ಇರುವ ಪ್ರಮುಖ ಶಕ್ತಿ ಯಾವುದು ಎಂದು ಕಂಡುಹಿಡಿಯಬೇಕಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ವಿನಾಕಾರಣ ಗುರಿ ಮಾಡಲಾಗುತ್ತಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದರು.
ಇದರಲ್ಲಿ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಸಚಿವ ಯತೀಂದ್ರ ಹೇಳಿದ್ದಾರೆ. ಸರಿಯಾಗಿ ಯಾರನ್ನೂ ಬಂಧಿಸಿಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪ ಮಾಡಿದ್ದಾರೆ. ಪಕ್ಷದಲ್ಲಿನ ಒಳ ಜಗಳದಿಂದಾಗಿ ಅವರಿಗೆ ಅಪಮಾನ ಮಾಡಲಾಗಿದೆ. ಈ ವಿಧಾನಪರಿಷತ್ ಚುನಾವಣೆಯಲ್ಲಿ ಇದರ ಪರಿಣಾಮ ಗೊತ್ತಾಗಿದೆ. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಇನ್ನೂ ರೈತರಿಗೆ ಬರ ಪರಿಹಾರ ನೀಡದೆ 17 ಷರತ್ತುಗಳನ್ನು ಹಾಕಲಾಗಿದೆ. ಇದರಿಂದಾಗಿ ರೈತರು ಪರಿಹಾರ ಪಡೆಯಲು ಹೋಗುತ್ತಿಲ್ಲ. ಸರ್ಕಾರ ದಿವಾಳಿಯಾಗಿರುವುದು ಖಚಿತವಾಗಿದೆ ಎಂದರು.
ಪಂಚಾಯಿತಿ ಚುನಾವಣೆಗೆ ನಾವು ಸಿದ್ಧವಾಗಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಸಮೀಕ್ಷೆಗಳನ್ನು ಮಾಡಿದ್ದೇವೆ. ಯಾವುದೇ ಸಮಯದಲ್ಲಿ ಚುನಾವಣೆ ನಡೆದರೂ ಎನ್‌ಡಿಎ ಗೆಲ್ಲಲಿದೆ ಎಂದರು.
ಆಂದೋಲನ
ಪ್ರಜಾಪ್ರಭುತ್ವ ಉಳಿಸಿ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಜಾರಿ ಮಾಡಿದ್ದ ಕಾಂಗ್ರೆಸ್ ನಾಯಕರು, ಈಗ ಬಾಂಗ್ಲಾ, ಶ್ರೀಲಂಕಾದಂತೆ ದಂಗೆ ಏಳಬೇಕೆಂದು ಜನರನ್ನು ಪ್ರಚೋದಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೂ ಪ್ರಧಾನಿ ನರೇಂದ್ರ ಮೋದಿ ತೊಂದರೆ ಕೊಡಲಿಲ್ಲ. ಅಧಿಕಾರ ಹಿಡಿದ ನಂತರ ಒಂದೇ ಒಂದು ಅಭಿವೃದ್ಧಿ ಕೆಲಸವನ್ನು ಕಾಂಗ್ರೆಸ್ ಮಾಡಲಿಲ್ಲ. ಅದರ ಬದಲು ಹಾಲಿನ ದರ, ಮೊಸರಿನ ದರವನ್ನು ಏರಿಸಿದ್ದಾರೆ. ರೈತರಿಗೆ ಬರ ಪರಿಹಾರವಾಗಿ 2,500 ರೂ. ನೀಡುತ್ತೇನೆಂದು ಹೇಳಿ, ಅದನ್ನೂ ಮಾಡಲಿಲ್ಲ. ಇಂತಹ ಸ್ಥಿತಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿ ಪ್ರತಿಭಟಿಸುತ್ತಿದ್ದಾರೆ ಎಂದರು.








