ಕೇರಳದ ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ನಿಷೇಧಿತ ಪ್ರದೇಶಗಳಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ನಿಷೇಧಿತ ಸ್ಥಳಗಳಲ್ಲಿ ಅಕ್ರಮವಾಗಿ ಚಿತ್ರೀಕರಣ ನಡೆಸುವವರನ್ನು ಬಂಧಿಸುವುದು ಸೇರಿದಂತೆ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಅವರ ಮೊಬೈಲ್ ಫೋನ್ ಮತ್ತು ಕ್ಯಾಮೆರಾಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ.
ಶಬರಿಮಲೆ ಸನ್ನಿಧಾನದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಮಾಳಿಗಪುರಂ ದೇವಿಯ ವಿಗ್ರಹಗಳ ಫೋಟೋ ಮತ್ತು ವಿಡಿಯೋಗಳನ್ನು ರಹಸ್ಯವಾಗಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ದೇವಸ್ವಂ ವಿಜಿಲೆನ್ಸ್ ವಿಭಾಗವೂ ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.
ರಹಸ್ಯವಾಗಿ ವಿಡಿಯೋ ಚಿತ್ರೀಕರಣ
ಕೆಲವರು ದರ್ಶನಕ್ಕೆ ತೆರಳುವ ಮೊದಲು ಮೊಬೈಲ್ ಫೋನ್ನಲ್ಲಿ ವಿಡಿಯೋ ರೆಕಾರ್ಡಿಂಗ್ ಆರಂಭಿಸಿ, ಬಳಿಕ ಶರ್ಟ್ನ ಜೇಬು, ಇರುಮುಡಿ ಅಥವಾ ಇತರ ವಸ್ತುಗಳಲ್ಲಿ ಫೋನ್ ಅನ್ನು ಮರೆಮಾಡಿಕೊಂಡು ಚಿತ್ರೀಕರಣ ನಡೆಸುತ್ತಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ. ಇಂತಹ ದೃಶ್ಯಗಳನ್ನು ಬಳಿಕ ಇತರ ವಿಡಿಯೋಗಳೊಂದಿಗೆ ಸೇರಿಸಿ ಯೂಟ್ಯೂಬ್, ವಾಟ್ಸಾಪ್ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಯಾವ ಸ್ಥಳಗಳಲ್ಲಿ ಚಿತ್ರೀಕರಣ ನಿಷೇಧ?
ಶಬರಿಮಲೆಯ ಶ್ರೀಕೋವಿಲ್, ಅಯ್ಯಪ್ಪ ಸ್ವಾಮಿ ವಿಗ್ರಹ, ಪಥಿನೆಟ್ಟಂಪಡಿ (18 ಮೆಟ್ಟಿಲುಗಳು) ಹಾಗೂ ಮಾಳಿಗಪುರಂ ದೇವಸ್ಥಾನದ ಕೆಲವು ಪ್ರದೇಶಗಳಲ್ಲಿ ಫೋಟೋ ಮತ್ತು ವಿಡಿಯೋ ಚಿತ್ರೀಕರಣಕ್ಕೆ ಕಟ್ಟುನಿಟ್ಟಿನ ನಿರ್ಬಂಧವಿದೆ. ಈ ನಿಯಮಗಳನ್ನು ಪಾಲಿಸುವಂತೆ ಕೇರಳ ಹೈಕೋರ್ಟ್ ಕೂಡ ಹಲವು ಸಂದರ್ಭಗಳಲ್ಲಿ ನಿರ್ದೇಶನ ನೀಡಿದೆ.
ಭದ್ರತಾ ದೃಷ್ಟಿಯಿಂದ ಕ್ರಮ
ದೇವಾಲಯದ ನಿಷೇಧಿತ ಪ್ರದೇಶಗಳ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವುದರಿಂದ ಭದ್ರತಾ ದೃಷ್ಟಿಯಿಂದಲೂ ಆತಂಕ ಎದುರಾಗಿದೆ. ಇಂತಹ ದೃಶ್ಯಗಳನ್ನು ಸಮಾಜವಿರೋಧಿ ಅಥವಾ ಉಗ್ರ ಸ್ವಭಾವದ ಸಂಘಟನೆಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕವನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಹೀಗಾಗಿ ಶಬರಿಮಲೆ ಸನ್ನಿಧಾನದಲ್ಲಿ ನಿಷೇಧಿತ ಸ್ಥಳಗಳಲ್ಲಿ ರಹಸ್ಯವಾಗಿ ಚಿತ್ರೀಕರಣ ಮಾಡುವವರನ್ನು ಪತ್ತೆಹಚ್ಚಲು ನಿಗಾ ಹೆಚ್ಚಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಬಂಧನ ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ಚಿತ್ರೀಕರಣಕ್ಕೆ ಬಳಸಿದ ಮೊಬೈಲ್ ಹಾಗೂ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಶಬರಿಮಲೆಗೆ ತೆರಳುವ ಭಕ್ತರು ದೇವಾಲಯದ ನಿಯಮ ಹಾಗೂ ಪೊಲೀಸ್ ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.








