ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸುವ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಶುಕ್ರವಾರ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಅಮಿತ್ ಶಾ ಅವರಿಗೆ ಬಹುಶಃ ಮರೆವಿನ ಕಾಯಿಲೆ ಇರಬಹುದು ಅಥವಾ ಅವರು ಉದ್ದೇಶಪೂರ್ವಕವಾಗಿಯೇ ಸತ್ಯವನ್ನು ಹೇಳುತ್ತಿಲ್ಲ ಎಂದು ವ್ಯಂಗ್ಯವಾಡಿರುವ ಚಿದಂಬರಂ, ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದ್ದು, ಕಳೆದ 2023ರಲ್ಲೇ ಅಂಗೀಕಾರಗೊಂಡಿರುವ ಸಂವಿಧಾನದ 106ನೇ ತಿದ್ದುಪಡಿ ಕಾಯ್ದೆಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ನಮ್ಮ ಪಕ್ಷ ನಿರಂತರವಾಗಿ ಒತ್ತಾಯಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
2023ರಲ್ಲೇ ಅಂಗೀಕಾರವಾದ ಕಾಯ್ದೆ ಜಾರಿಗೆ ತರುತ್ತಿಲ್ಲವೇಕೆ? ಹೊಸ ಮಸೂದೆಯ ಅಗತ್ಯವೇನಿದೆ?
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (X) ಸರಣಿ ಪೋಸ್ಟ್ ಮಾಡಿರುವ ಪಿ. ಚಿದಂಬರಂ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಭರವಸೆಯ ಅನುಷ್ಠಾನಕ್ಕೆ ಕಾಂಗ್ರೆಸ್ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಆದರೆ ವಾಸ್ತವದಲ್ಲಿ ಸಂವಿಧಾನದ 106ನೇ ತಿದ್ದುಪಡಿ ಕಾಯ್ದೆಯು ಈಗಾಗಲೇ ಕಾನೂನಾಗಿ ಜಾರಿಗೆ ಬಂದಿದೆ ಎಂಬುದನ್ನು ನೆನಪಿಸಿದ್ದಾರೆ.
ಕಳೆದ 2023ರ ಸೆಪ್ಟೆಂಬರ್ 20 ಮತ್ತು 21ರಂದೇ ಸಂಸತ್ತಿನ ಉಭಯ ಸದನಗಳಲ್ಲೂ ಈ ಮಹಿಳಾ ಮೀಸಲಾತಿ ಮಸೂದೆಯು ಅಂಗೀಕಾರವಾಗಿತ್ತು. ಹೀಗಿರುವಾಗ ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ತಕ್ಷಣವೇ ಏಕೆ ಅನುಷ್ಠಾನಕ್ಕೆ ತರುತ್ತಿಲ್ಲ ಹಾಗೂ ಈಗ ಮತ್ತೆ ಹೊಸ ಮಸೂದೆಯ ಅಗತ್ಯವಾದರೂ ಏನಿದೆ ಎಂದು ಚಿದಂಬರಂ ನೇರವಾಗಿ ಪ್ರಶ್ನಿಸಿದ್ದಾರೆ.
ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯ ಷರತ್ತು: 334ಎ ವಿಧಿ ತೆಗೆದುಹಾಕಲು ಸವಾಲು!
ಮೀಸಲಾತಿ ವಿಳಂಬಕ್ಕೆ ಕೇಂದ್ರ ಸರ್ಕಾರವೇ ಸೇರಿಸಿರುವ ಅಡ್ಡಗೋಡೆಯನ್ನು ಬೊಟ್ಟು ಮಾಡಿರುವ ಚಿದಂಬರಂ, ಈ ಕಾಯ್ದೆಯ 334ಎ ವಿಧಿಯ ಪ್ರಕಾರ ಮುಂದಿನ ಜನಗಣತಿ ನಡೆದು, ಅದರ ಆಧಾರದ ಮೇಲೆ ಕ್ಷೇತ್ರಗಳ ಮರುವಿಂಗಡಣೆ (ಡಿಲಿಮಿಟೇಶನ್) ಕಾರ್ಯ ಪೂರ್ಣಗೊಂಡ ಬಳಿಕವಷ್ಟೇ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ. ಅಂದು ಸಂಸತ್ತಿನಲ್ಲಿ ಈ ಅನಗತ್ಯ ಷರತ್ತಿಗೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಜನಗಣತಿ ಮತ್ತು ಅದರ ನಂತರದ ಕ್ಷೇತ್ರ ಮರುವಿಂಗಡಣೆ ಎಂಬ ಎರಡು ಷರತ್ತುಗಳನ್ನು ಇದರಲ್ಲಿ ಅನಗತ್ಯವಾಗಿ ಸೇರಿಸಲಾಗಿದ್ದು, ಅಂದು ಬಿಜೆಪಿಯೇ ಈ ವಿಧಿಯನ್ನು ಸೇರಿಸಲೇಬೇಕು ಎಂದು ಹಠ ಹಿಡಿದಿತ್ತು ಎಂದು ಟೀಕಿಸಿದ್ದಾರೆ.
ಈಗಲೂ ಕಾಲ ಮಿಂಚಿಲ್ಲ, ಬಿಜೆಪಿ ಸರ್ಕಾರ ಮಾಡಬೇಕಿರುವುದು ಕೇವಲ ಆ ಕಾಯ್ದೆಯಿಂದ 334ಎ ವಿಧಿಯನ್ನು ತೆಗೆದುಹಾಕುವ ಪ್ರಸ್ತಾವನೆಯನ್ನು ಸಲ್ಲಿಸುವುದಷ್ಟೇ ಆಗಿದೆ. ಒಂದು ವೇಳೆ ಆ ವಿಧಿಯನ್ನು ತೆಗೆದುಹಾಕಿದರೆ ಮಹಿಳಾ ಮೀಸಲಾತಿಯನ್ನು ಈ ಕ್ಷಣವೇ ಜಾರಿಗೆ ತರಬಹುದು ಎಂದು ಚಿದಂಬರಂ ಸವಾಲು ಹಾಕಿದ್ದಾರೆ.
ಏನಿದು ವಿವಾದ? ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ಮಾಡಿದ್ದ ಆರೋಪವೇನು?
ಸಂವಿಧಾನ ಗೌರವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂವಿಧಾನವನ್ನು ಕೇವಲ ರಾಜಕೀಯ ಪ್ರದರ್ಶನಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಸಂವಿಧಾನದ ಪ್ರತಿಯನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಅಥವಾ ಸಾರ್ವಜನಿಕವಾಗಿ ಪ್ರದರ್ಶಿಸುವುದರಿಂದ ಮಾತ್ರ ಅದಕ್ಕೆ ಗೌರವ ನೀಡಿದಂತಾಗುವುದಿಲ್ಲ ಎಂದು ಕುಟುಕಿದ್ದರು. ಇದೇ ವೇಳೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸಲು ಬಿಜೆಪಿ ಬದ್ಧವಾಗಿದ್ದು, ಕಾಂಗ್ರೆಸ್ ಇದಕ್ಕೆ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಶಾ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಚಿದಂಬರಂ ಇದೀಗ ಕಾನೂನಾತ್ಮಕ ಅಂಶಗಳನ್ನಿಟ್ಟುಕೊಂಡು ತಿರುಗೇಟು ನೀಡಿದ್ದಾರೆ.








