ರಾಮನಗರ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ ನೇಮಕಾತಿ ಹಗರಣವೂ ಸೇರಿದಂತೆ ಯಾವುದೇ ಅಕ್ರಮದ ತನಿಖೆಯಿಂದಲೂ ನಮ್ಮ ಸರ್ಕಾರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಹಗರಣದ ಹಿಂದೆ ಎಷ್ಟೇ ಪ್ರಭಾವಿಗಳು ಇದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಇಂದಲ್ಲ ನಾಳೆ ಸತ್ಯ ಹೊರಬರಲೇಬೇಕು, ಈಗಾಗಲೇ ಈ ಕುರಿತು ಸಿಐಡಿ ಹಾಗೂ ಎಸ್ಐಟಿ ತನಿಖೆ ನಡೆದಿದ್ದು, ಎಲ್ಲವೂ ಪಾರದರ್ಶಕವಾಗಿ ಸಾಗುತ್ತಿದೆ. ಅಂತಿಮವಾಗಿ ಇದು ಯಾರ ಮನೆ ಬಾಗಿಲಿಗೆ ಹೋಗಿ ಬೀಳುತ್ತದೋ ಕಾದು ನೋಡೋಣ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾರ್ಮಿಕವಾಗಿ ಎಚ್ಚರಿಕೆ ನೀಡಿದ್ದಾರೆ.
ಇ.ಡಿ ದೂರಿನ ಬಗ್ಗೆ ಕಾನೂನು ಅಭಿಪ್ರಾಯ: ಬಿಜೆಪಿ ಸೇರಿದ ತಕ್ಷಣ ವೈಟ್ ವಾಶ್ ಆದ್ರಾ?
ನಗರದ ಜಾನಪದ ಲೋಕದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಪಿಎಸ್ಸಿ (KPSC) ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿದರು. ಇ.ಡಿ ನೀಡಿರುವ ದೂರನ್ನು ನಾನು ಇನ್ನೂ ನೋಡಿಲ್ಲ. ಇನ್ನೂ ಮೂರು ಪ್ರಕರಣಗಳನ್ನು ದಾಖಲಿಸಬೇಕು ಎಂದು ಅವರು ಹೇಳುತ್ತಿದ್ದಾರೆ. ಈ ಎಲ್ಲದರ ಕುರಿತು ಸೂಕ್ತ ಕಾನೂನು ಅಭಿಪ್ರಾಯ ಪಡೆದು ಮುಂದಿನ ಪರಿಶೀಲನೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯವೈಖರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ, ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಐ.ಟಿ ಮತ್ತು ಇ.ಡಿ ದಾಳಿಗಳನ್ನು ನಡೆಸಿ ಸಾವಿರಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಈವರೆಗೆ ಎಷ್ಟು ಜನರಿಗೆ ಶಿಕ್ಷೆಯಾಗಿದೆ? ಕೇವಲ ಶೇಕಡಾ 2ರಷ್ಟು ಪ್ರಕರಣಗಳಲ್ಲೂ ಶಿಕ್ಷೆಯಾಗಿಲ್ಲ. ಈ ಕಟು ಸತ್ಯವನ್ನು ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಸಂಸತ್ ಅಧಿವೇಶನದಲ್ಲಿ ತಿಳಿಸಿದ್ದಾರೆ. ತಮ್ಮ ಮೇಲೆ ದಾಳಿಯಾಗುತ್ತಿದ್ದಂತೆಯೇ ಹಲವು ನಾಯಕರು ಬಿಜೆಪಿ ಸೇರಿದರು, ಇನ್ನು ಕೆಲವರು ಮುಖ್ಯಮಂತ್ರಿಗಳೂ ಆದರು. ಹಿಂದೆ ಅವರೆಲ್ಲರನ್ನೂ ಇದೇ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಭ್ರಷ್ಟರು ಎಂದು ಕರೆದಿದ್ದರು. ಹಾಗಾದರೆ ಬಿಜೆಪಿ ಸೇರುತ್ತಿದ್ದಂತೆಯೇ ಅವರೆಲ್ಲರೂ ವಾಷಿಂಗ್ ಮಷಿನ್ನಲ್ಲಿ ವೈಟ್ ವಾಶ್ ಆದ್ರಾ ಎಂದು ಖಾರವಾಗಿ ಪ್ರಶ್ನಿಸಿದರು.
20 ವರ್ಷಗಳ ಕಾಲ ಕತ್ತೆ ಕಾಯುತ್ತಿದ್ರಾ? ಚುನಾವಣೆ ಬಂದಾಗಲೆಲ್ಲಾ ಇ.ಡಿ ದಾಳಿ!
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಎಳೆದು ತರುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಖರ್ಗೆ ಅವರಿಗೂ ಯಂಗ್ ಇಂಡಿಯಾ ಟ್ರಸ್ಟ್ಗೂ ಏನು ಸಂಬಂಧ? ಬರೋಬ್ಬರಿ 20 ವರ್ಷಗಳ ಹಿಂದಿನ ವಿಷಯವನ್ನು ಇ.ಡಿ ಅಧಿಕಾರಿಗಳು ಈಗ ಕೆದಕಿದ್ದಾರೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಮೇಲೂ ಅನೇಕ ಪ್ರಕರಣಗಳನ್ನು ಜಡಿದಿದ್ದಾರೆ. ರಾಬರ್ಟ್ ವಾದ್ರಾ ಸೇರಿದಂತೆ ಹಲವರ ಹೆಸರನ್ನು ತೆಗೆದುಕೊಂಡಿದ್ದಾರೆ. ಹಾಗಾದರೆ ಅಂದಿನಿಂದ ಇವರೇನು ಕತ್ತೆ ಕಾಯುತ್ತಿದ್ರಾ? ಇದುವರೆಗೆ ಒಂದೇ ಒಂದು ಪ್ರಕರಣವನ್ನೂ ಸಾಬೀತುಪಡಿಸಲು ಇವರಿಗೆ ಸಾಧ್ಯವಾಗಿಲ್ಲ. ಸುಮ್ಮನೆ ದಾಳಿ ನಡೆಸಿ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಕೂಡ ತನಿಖಾ ಸಂಸ್ಥೆಗಳಿಗೆ ಛೀಮಾರಿ ಹಾಕಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ದಾಳಿಗಳು ಇನ್ನಷ್ಟು ಜಾಸ್ತಿಯಾಗಲಿವೆ. ಅದರಲ್ಲೂ ಬಿಜೆಪಿ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಯಾರಾದರೂ ಧ್ವನಿ ಎತ್ತಿದರೆ ತಕ್ಷಣವೇ ಅವರ ಮೇಲೆ ದಾಳಿಯಾಗುತ್ತದೆ ಎಂದು ಇ.ಡಿ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು.
ಶೇ.90ರಷ್ಟು ಹಣ ವಸೂಲಿ: ಸಾಕ್ಷ್ಯಾಧಾರ ಆಧರಿಸಿಯೇ ನಾಗೇಂದ್ರಗೆ ಸಿಐಡಿ ಕ್ಲೀನ್ಚಿಟ್!
ಇನ್ನು ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಸಿಐಡಿ ಕ್ಲೀನ್ಚಿಟ್ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಸೂಕ್ತ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆಯೇ ಮಾಜಿ ಸಚಿವ ನಾಗೇಂದ್ರ ಅವರಿಗೆ ಸಿಐಡಿ ಕ್ಲೀನ್ಚಿಟ್ ನೀಡಿದೆ. ಆ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇಕಡಾ 90ರಷ್ಟು ಹಣವನ್ನು ವಸೂಲಿ ಮಾಡಲಾಗಿದೆ. ವಿಚಾರಣೆ ವೇಳೆ ನಾಗೇಂದ್ರ ಅವರ ಬಳಿ ಯಾವುದೇ ಅಕ್ರಮ ಹಣ ಪತ್ತೆಯಾಗಿಲ್ಲ. ಈ ತನಿಖೆಯಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ. ಅಲ್ಲದೆ, ಇದೇ ಪ್ರಕರಣದ ತನಿಖೆಯು ಪರ್ಯಾಯವಾಗಿ ಐ.ಟಿ ಮತ್ತು ಇ.ಡಿ ಸಂಸ್ಥೆಗಳಿಂದಲೂ ನಡೆಯುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು.








