ಗದಗ: ದಿಢೀರ್ ಆದ ಭೂಕುಸಿತದಲ್ಲಿ ಸಿಲುಕಿದ್ದ ಬಾಲಕಿಯೊಬ್ಬಳು ಪವಾಡ ಸದೃಷ ರೀತಿಯಲ್ಲಿ ಪಾರಾದ ಘಟನೆ ಗದಗ್ ಜಿಲ್ಲೆಯ ನರಗುಂದದಲ್ಲಿ ನಡೆದಿದೆ.
ನರಗುಂದ ಪಟ್ಟಣದ ದಂಡಾಪುರದ ಕುರುಬಗೇರಿ ಓಣಿಯಲ್ಲಿ ಇಂದು ಬೆಳಿಗ್ಗೆ ದಿಢೀರ್ ಭೂಕುಸಿತವಾಗಿದೆ. ಮನೆಯಲ್ಲಿ 14 ವರ್ಷದ ಬಾಲಕಿ ಕಾವ್ಯಾ ನುಗ್ಗನಟ್ಟಿ ಟಿ.ವಿ ನೋಡುತ್ತಾ ಕುಳಿತಿದ್ದಳು. ಈ ವೇಳೆ ಮನೆಯ ನೆಲ ದಿಢೀರ್ ಕುಸಿತಗೊಂಡಿದೆ. ಭೂಕುಸಿತದಿಂದಾಗಿ 8ರಿಂದ 10 ಅಡಿ ಆಳದ ಕಂದಕ ಉಂಟಾಗಿದೆ. ಟಿ.ವಿ ನೋಡುತ್ತಿದ್ದ ಕಾವ್ಯಾ, ಸಿಲುಕಿ ಮಣ್ಣಿನಡಿ ಸಿಲುಕಿ ಕೂಗಿಕೊಂಡಿದ್ದಾಳೆ. ಬಾಲಕಿಯ ಚೀರಾಟ ಕೇಳಿದ ಧಾವಿಸಿದ ಸ್ಥಳೀಯರು ಸುಮಾರು 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ಮಣ್ಣಿನಿಂದ ಹೊರಗೆ ತೆಗೆದಿದ್ದಾರೆ.

ಬಾಲಕಿಯ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ನರಗುಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಹಿಂದೆಯೂ ನರಗುಂದಲ್ಲಿ ಉಂಟಾದ ಭೂಕುಸಿತದಲ್ಲಿ ವೃದ್ಧ ದಂಪತಿ ಹಾಗೂ ಎತ್ತು ಸಿಲುಕಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಇದೇ ಸ್ಥಳದಲ್ಲಿ ಪದೇ ಪದೇ ಭೂಕುಸಿತ ಆಗುತ್ತಿರುವುದಕ್ಕೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿರುವುದರಿಂದ ಪದೇ ಪದೆ ಭೂಕುಸಿತವಾಗುತ್ತಿದೆ. ನೂರಾರು ವರ್ಷಗಳ ಹಿಂದೆ ಕಟ್ಟಿದ ಹಗೆಗಳು ಕುಸಿಯುತ್ತಿರುವುದರಿಂದ ಭೂಕುಸಿತವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನರಗುಂದ ಭಾಗದಲ್ಲಿ 30ಕ್ಕೂ ಹೆಚ್ಚು ಬಾರಿ ಭೂಮಿ ಕುಸಿದಿದೆ ಎನ್ನಲಾಗಿದೆ. ಭೂವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿದರೂ ಯಾವ ಕಾರಣಕ್ಕೆ ಇಲ್ಲಿ ಭೂಕುಸಿತ ಉಂಟಾಗುತ್ತಿದೆ ಎಂಬುದರ ಬಗ್ಗೆ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಪದೇ ಪದೆ ಭೂಕುಸಿತವಾಗುತ್ತಿರುವುದು ಈ ಭಾಗದ ಜನರ ನಿದ್ದೆಕೆಡಿಸಿದೆ. ಯಾವಾಗ ಏನಾಗುತ್ತೋ ಎನ್ನುವ ಆತಂಕದಲ್ಲಿ ಜನರು ಜೀವನ ನಡೆಸುವಂತಾಗಿದೆ. ಇನ್ನಾದರೂ ಗದಗ ಜಿಲ್ಲಾಡಳಿತ ನಿಖರವಾದ ಕಾರಣ ಪತ್ತೆ ಹಚ್ಚಿ ಜನರು ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಡಬೇಕಾಗಿದೆ.









