ಕೋವಿಡ್ ಕೇರ್ ಸೆಂಟರ್ ಗೆ ಸಿದ್ದರಾಮಯ್ಯ ಭೇಟಿ
ಬೆಂಗಳೂರು : ಕೋವಿಡ್ ವಿಚಾರವಾಗಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಇಂದು ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಹಾಸಿಗೆ ಹಾಗೂ ದಿಂಬು ಪರಿಶೀಲನೆ ನಡೆಸಿದ್ದಾರೆ.
ಇಂದು ತುಮಕೂರು ರಸ್ತೆಯ ಬಿಐಇಸಿ ಗ್ರೌಂಡ್ ನಲ್ಲಿರುವ ಸುಮಾರು 10 ಸಾವಿರ ಹಾಸಿಗೆಗಳುಳ್ಳ ಕೋವಿಡ್ ಕೇರ್ ಸೆಂಟರ್ ಗೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಇತರೆ ಎಲ್ಲ ರೀತಿಯ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇನ್ನು ಭೇಟಿ ವೇಳೆ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಹೆಚ್.ಎಂ ರೇವಣ್ಣ ಸಾಥ್ ನೀಡಿದ್ದರು.
ಈ ಮೊದಲು ಸರ್ಕಾರ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ದಿನಕ್ಕೆ 800ರಂತೆ ಬೆಡ್ ಬಾಡಿಗೆ ಪಡೆದಿತ್ತು. ಈ ಕುರಿತು ಆರೋಪಗಳು ಎದುರಾದ ನಂತರ ಬೆಡ್ ಖರೀದಿಸುವಂತೆ ಸಿಎಂ ಯಡಿಯೂರಪ್ಪ, ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಇನ್ನು ಕೋವಿಡ್ ಕಿಟ್ ಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದು, ಟ್ವಿಟ್ಟರ್ ನಲ್ಲಿ ಲೆಕ್ಕಕೊಡಿ ಅಭಿಯಾನ ಆರಂಭಿಸಿದ್ದಾರೆ.








