ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕು ಹರಡಲು ತಡೆಯುವ ನಿಟ್ಟಿನಲ್ಲಿ ಒಂದು ವಾರದಿಂದ ಲಾಕ್‍ಡೌನ್ ಆಗಿದ್ದ ರಾಜಧಾನಿ ಬೆಂಗಳೂರು ಇಂದಿನಿಂದ ಅನ್‍ಲಾಕ್ ಆಗಿದೆ.

ಬೆಳಿಗ್ಗೆ 5 ಗಂಟೆಗೆ ಲಾಕ್‍ಡೌನ್ ಆದೇಶ ತೆರವುಗೊಂಡಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಬೆಳಿಗ್ಗೆಯಿಂದ ನಗರದಲ್ಲಿ ವಾಹನ ಸಂಚಾರಕ್ಕೆ ಇದ್ದ ನಿರ್ಬಂಧ ತೆರವು ಮಾಡಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರ ಪುನಾರಂಭಗೊಂಡಿದೆ.
ಮೆಜೆಸ್ಟಿಕ್‍ನ ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಿಂದ ಬಸ್‍ಗಳ ಸಂಚಾರ ಆರಂಭಗೊಂಡಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭಗೊಂಡಿಲ್ಲ, ಹೀಗಾಗಿ ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಬಸ್‍ಗಳಿಗಾಗಿ ಪ್ರಯಾಣಿಕರು ಕಾದು ಕುಳಿತ ದೃಶ್ಯ ಕಂಡು ಬರುತ್ತಿದೆ.
ನಗರದಲ್ಲಿ ಆಟೋ, ಓಲಾ-ಉಬರ್ ಸೇರಿದಂತೆ ವಾಣಿಜ್ಯ ಕ್ಯಾಬ್‍ಗಳ ಸಂಚಾರವೂ ಪುನಾರಂಭಗೊಂಡಿದೆ. ಬಹುತೇಕ ಹೋಟೆಲ್‍ಗಳು ಬೆಳಿಗ್ಗೆಯಿಂದಲೇ ಓಪನ್ ಆಗಿವೆ. ಹೋಟೆಲ್‍ಗಳಿಗೆ ಹೋಗುವ ಮುನ್ನ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.
ಬೆಂಗಳೂರೂರಿಗೆ ಸಂಪರ್ಕಿಸುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಆರಂಭಗೊಂಡಿದ್ದು, ಟೋಲ್‍ಗಳಲ್ಲಿ ವಾಹನ ದಟ್ಟಣೆ ಕಂಡು ಬಂದಿದೆ. ನೆಲಮಂಗಲ, ದೇವನಹಳ್ಳಿ ಹಾಗೂ ಹೊಸಕೋಟೆ ಟೋಲ್‍ಗಳಲ್ಲಿ ಬೆಳಿಗ್ಗೆಯಿಂದಲೇ ವಾಹನ ದಟ್ಟಣೆ ಕಂಡುಬರುತ್ತಿದೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಫ್ಲೈ ಓವರ್‍ಗಳನ್ನು ಪೊಲೀಸರು ಬಂದ್ ಮಾಡಿದ್ದರು. ಆದರೆ, ಇಂದಿಗೆ ಲಾಕ್‍ಡೌನ್ ತೆರವಾದ ಹಿನ್ನೆಲೆಯಲ್ಲಿ ಫ್ಲೈಓವರ್‍ಗಳನ್ನು ವಾಹನ ಸಂಚಾರಕ್ಕೆ ತೆರವು ಮಾಡಲಾಗಿದೆ.
ಸ್ಥಗಿತಗೊಂಡಿದ್ದ ಕೆ.ಆರ್ ಮಾರುಕಟ್ಟೆಯಲ್ಲಿ ವ್ಯಾಪಾರ ಬಹಿವಾಟು ಪುನಾರಂಭಗೊಂಡಿದ್ದು, ವಾಹನ ಸಂಚಾರಕ್ಕೆ ಪೊಲೀಸರು ಅವಕಾಶ ನೀಡಿದ್ದಾರೆ.
ಲಾಕ್‍ಡೌನ್ ತೆರವಾದ ಹಿನ್ನೆಲೆಯಲ್ಲಿ ಸಸ್ಯಕಾಶಿ ಲಾಲ್‍ಬಾಗ್ ಸೇರಿದಂತೆ ಬಹುತೇಕ ಪಾರ್ಕ್‍ಗಳು ಓಪನ್ ಆಗಿರುವ ಹಿನ್ನೆಲೆಯಲ್ಲಿ ವಾಯುವಿಹಾರಕ್ಕೆ ತೆರಳುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂತು.








