ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆಗೆ ಒಳಗಾಗುವ ಮೂಲಕ ದಿನ ಬೆಳಗಾಗುವುದರೊಳಗೆ ರಾಜ್ಯಾದ್ಯಂತ ಮನೆ ಮಾತಾಗಿರುವ ಕೆರೆ ಕಾಮೇಗೌಡರಿಗೂ ಕೊರೊನಾ ಪಾಸಿಟಿವ್ ಬಂದಿದೆ.
ಈ ಹಿನ್ನೆಲೆಯಲ್ಲಿ ಕಾಮೇಗೌಡರ ಊರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ.
ಗ್ರಾಮದ ಕಾಮೇಗೌಡರ ಮನೆಯನ್ನು ಸಂಪರ್ಕಿಸುವ ರಸ್ತೆಯನ್ನು ಸೀಲ್‍ಡೌನ್ ಮಾಡಿರುವ ಮಂಡ್ಯ ಜಿಲ್ಲಾಡಳಿತ, ಈ ಪ್ರದೇಶದಲ್ಲಿ ಯಾರು ಮನೆಯಿಂದ ಹೊರ ಬರದಂತೆ ಕಟ್ಟಪ್ಪಣೆ ಮಾಡಿದೆ.

ಕಳೆದ ಕೆಲ ದಿನಗಳಿಂದ ಕೆರೆ ಕಾಮೇಗೌಡರ ಆರೋಗ್ಯದಲ್ಲಿ ತೊಂದರೆ ಕಂಡುಬಂದಿತ್ತು. ಅವರ ಬಲಗಾಲಿನಲ್ಲಿ ಆಗಿದ್ದ ಗಾಯಕ್ಕೆ ಚಿಕಿತ್ಸೆ ಪಡೆಯಲು ಹಲವು ಬಾರಿ ಆಸ್ಪತ್ರೆಗಳಿಗೆ ಸುತ್ತಾಡಿದ್ದರು. ಆಸ್ಪತ್ರೆಗಳಿಗೆ ಸುತ್ತಾಡಿದ್ದರಿಂದ ಕಾಮೇಗೌಡರಿಗೆ ಸೋಂಕು ಹರಡಿರುವ ಸಾಧ್ಯತೆ ಇದೆ.
ಕೊರೊನಾ ಟೆಸ್ಟ್‍ನಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕಾವೇಗೌಡರನ್ನು ಮಂಡ್ಯದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೆರೆಗಳ ಜೀರ್ಣೋದ್ಧಾರಕ್ಕೆ ಕಾಮೇಗೌಡರು ಮಾಡಿದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನ್‍ಕಿ ಬಾತ್‍ನಲ್ಲಿ ಗುಣಗಾನ ಮಾಡಿದ್ದರು. ಮೋದಿ ಅವರಿಂದ ಮೆಚ್ಚುಗೆ ಮಾತುಗಳು ಕೇಳಿ ಬಂದ ಬೆನ್ನಲ್ಲೇ, ಕಾಮೇಗೌಡರ ಸಾಧನೆ ಸುಳ್ಳು ಎಂಬ ಆರೋಪಗಳು ಕೇಳಿ ಬಂದಿವೆ. ಕಾಮೇಗೌಡರ ವಿರುದ್ಧ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರಿಗೂ ದೂರು ನೀಡಿ ಕೆಲವರು ತನಿಖೆಗೆ ಆಗ್ರಹಿಸಿದ್ದಾರೆ.
ಈ ವಿವಾದದ ನಡುವೆಯೇ ಕಾಮೇಗೌಡರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಆತಂಕ ಮೂಡಿಸಿದೆ.








