ಬೆಂಗಳೂರು : ನಂಗೆ ಕುಮಾರಸ್ವಾಮಿ ಅವರ ಭಾಷೆ ಅರ್ಥ ಆಗಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಕುಟುಕಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ನಲ್ಲಿ.
“ಕಾಂಗ್ರೆಸ್ ನಾಯಕರು ಈಗ ಮರಣೋತ್ತರ ಪರೀಕ್ಷೆ ಬಗ್ಗೆ ರಾಗ ಎಳೆಯುತ್ತಿದ್ದಾರೆ. ಆದರೆ ವರದಿಯಲ್ಲಿ ಏನಿದೆ ಎಂಬ ಸತ್ಯಾಂಶವನ್ನು ನಾನು ಹೇಳಿದರೆ ಆ ಭಾಷೆ ನನಗೆ ಅರ್ಥವಾಗಲಿಲ್ಲ ಎಂದು ಜಾರಿಕೊಳ್ಳುವುದು ತರವಲ್ಲ”.
“ಅವರ ಕನಸು-ಕನವರಿಕೆಗಳನ್ನು ಮೈತ್ರಿ ಸರ್ಕಾರ ಹೋದ ನಂತರವೂ ಜಪಿಸುತ್ತಿರುವುದರಿಂದಲೇ ಹಳೆಯದನ್ನು ನೆನಪಿಸಿಕೊಳ್ಳಬೇಕಾಯಿತು. ನಮ್ಮ ಅವರ ದೋಸ್ತಿ ಕಳಚಿದ ನಂತರ ಈ ಬಗ್ಗೆ ನಾನು ಮಾತನಾಡಿರಲಿಲ್ಲ. ಕಾಂಗ್ರೆಸ್ ನಾಯಕರೇ ಪದೇಪದೇ ಮೈತ್ರಿ ಮುಗಿದ ಅಧ್ಯಾಯ ಎಂದು ಈಗ ತುಟಿ ಬಿಚ್ಚುತ್ತಿರುವುದರಿಂದ ನಾನು ಮೌನ ಮುರಿಯಬೇಕಾಯಿತು”.
“ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ರಾಜ್ಯದಲ್ಲಿ 8 ಇಲ್ಲವೆ 10 ಸ್ಥಾನ ಗೆಲ್ಲಬಹುದಿತ್ತು ಎಂದು ಸಿದ್ದರಾಮಯ್ಯ ಅವರು ಇತ್ತೀಚೆಗೆ ‘ಮೆಲುಕು’ ಹಾಕಿದ್ದರಿಂದಲೇ ನಾನು ಸಿದ್ಧೌಷಧದ ಬಗ್ಗೆ ನೆನಪಿಸಿಕೊಳ್ಳಬೇಕಾಯಿತು”.








