ಮೈಸೂರು: ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆಯ ಕಾರ್ಮಿಕರಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡು ಇಡೀ ಮೈಸೂರು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿತ್ತು. ಈಗ ಜೆ.ಕೆ. ಟೈರ್ಸ್ ಕಾರ್ಖಾನೆ ಸರದಿ.
ಜೆ.ಕೆ ಟೈರ್ಸ್ ಕಾರ್ಖಾನೆಯ 107 ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಎಲ್ಲಾ ಕಾರ್ಮಿಕರು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಈ ನಡುವೆ ಕಾರ್ಖಾನೆಯ 107ಕ್ಕೂ ಹೆಚ್ಚು ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಬಂದರೂ ಸೀಲ್ಡೌನ್ ಮಾಡದೆ ಪಾಸಿಟಿವ್ ಬಂದವರನ್ನು ಹೊರತುಪಡಿಸಿ ಉಳಿದವರು ಕೆಲಸಕ್ಕೆ ಹಾಜರಾಗುವಂತೆ ಆಡಳಿತ ಮಂಡಳಿ ನೋಟಿಸ್ ಜಾರಿ ಮಾಡಿದೆ.

ಕಾರ್ಮಿಕರಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕಾರ್ಖಾನೆಯ ಎರಡು ಸ್ಥಾವರಗಳಲ್ಲಿ ಮೂರು ದಿನ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಆದರೆ, ಇಂದಿನಿಂದ ಮತ್ತೆ ಕಾರ್ಖಾನೆಯಲ್ಲಿ ಉತ್ಪಾದನೆ ಆರಂಭಿಸಲು ಅಡಳಿತ ಮಂಡಳಿ ಮುಂದಾಗಿರುವುದು ಕಾರ್ಮಿಕರಲ್ಲಿ ಆತಂಕ ಸೃಷ್ಟಿಸಿದೆ.
ಕಾರ್ಖಾನೆಯಲ್ಲಿ 6 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನಂಜನಗೂಡಿನ ಜ್ಯುಬಿಲಿಯಂಟ್ ಮಾಡಿದ ಯಡವಟ್ಟನ್ನೇ ಜೆ.ಕೆ ಟೈರ್ಸ್ ಕಂಪನಿಯೂ ಮಾಡಲು ಹೊರಟಿದ್ದು, ನೌಕರರಿಗೆ ರಕ್ಷಣೆ ಒದಗಿಸುವ ವಿಚಾರದಲ್ಲಿ ಕಾರ್ಖಾನೆ ನಿರ್ಲಕ್ಷ್ಯ ತೋರುತ್ತಿದೆ. ಕಂಪನಿಯ ಈ ನಿರ್ಲಕ್ಷ್ಯದಿಂದ ಮುಂದೆ ಅನಾಹುತವಾದ್ರೆ ಯಾರು ಹೊಣೆ ಎಂದು ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.









