ಬೆಂಗಳೂರು: ಕಳೆದ ಒಂದು ತಿಂಗಳಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ತಲೆ ನೋವಾಗಿದ್ದ ಎಂಎಲ್ಸಿಗಳ ನಾಮನಿರ್ದೇಶನ ಗೊಂದಲಕ್ಕೆ ತೆರೆ ಬಿದ್ದಿದೆ. ಇಂದು ಯಡಿಯೂರಪ್ಪ ಅವರು ನೀಡಿದ ನಾಮನಿರ್ದೇಶಿತರ ಪಟ್ಟಿಗೆ ರಾಜ್ಯಪಾಲ ವಜುಭಾಯ್ ವಾಲಾ ಅಂಕಿತ ಹಾಕಿದ್ದು, ರಾಜಭವನದಿಂದ ಅಧಿಕೃತ ಆದೇಶ ಹೊರಬಿದ್ದಿದೆ.
ನೂತನ ನಾಮನಿರ್ದೇಶಿತ ವಿಧಾನ ಪರಿಷತ್ ಸದಸ್ಯರಾಗಿ ಮಾಜಿ ಸಚಿವ ಹೆಚ್.ವಿಶ್ವನಾಥ್, ಸಿ.ಪಿ ಯೋಗೇಶ್ವರ್, ಭಾರತಿ ಶೆಟ್ಟಿ, ಡಾ.ತಳವಾರ್ ಸಾಬಣ್ಣ ಹಾಗೂ ಶಾಂತಾರಾಂ ಬುದ್ನಸಿದ್ದಿ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಇದರೊಂದಿಗೆ ಹಿಂದಿನ ಚುನಾವಣೆಗಳಲ್ಲಿ ಸೋತಿದ್ದ ಹೆಚ್.ವಿಶ್ವನಾಥ್ ಹಾಗೂ ಸಿ.ಪಿ ಯೋಗೇಶ್ವರ್ ವಿಧಾನಪರಿಷತ್ ಎಂಟ್ರಿಗೆ ಹಾದಿ ಸುಗಮವಾಗಿದೆ.
ಕಳೆದ ಉಪಚುನಾವಣೆಯಲ್ಲಿ ಹುಣಸೂರಿನಿಂದ ಸೋಲು ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಅವರ ಮಂತ್ರಿಯಾಗುವ ಕನಸಿಗೆ ತಣ್ಣೀರೆರಚಿತ್ತು. ಇತ್ತೀಚೆಗೆ ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲೂ ವಿಶ್ವನಾಥ್ ಹಾಗೂ ಸಿ.ಪಿ ಯೋಗೇಶ್ವರ್ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಇಬ್ಬರಿಗೂ ಟಿಕೆಟ್ ತಪ್ಪಿ ಭಾರೀ ನಿರಾಸೆ ಮೂಡಿಸಿತ್ತು.
ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ಭಾರತಿ ಶೆಟ್ಟಿ ಅವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಲಾಗಿದೆ. ಈ ರೇಸ್ನಲ್ಲಿದ್ದ ನಟಿ ಮಾಳವಿಕಾ ಅವಿನಾಶ್ಗೆ ನಿರಾಸೆಯಾಗಿದೆ. ಉಳಿದಂತೆ ಶಿಕ್ಷಣ ತಜ್ಞ, ವಾಗ್ಮಿ ಗುರುರಾಜ ಕರ್ಜಗಿ ಹೆಸರು ಕೂಡ ಚಾಲ್ತಿಯಲ್ಲಿತ್ತು. ಆದರೆ, ಈ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿರುವ ಬಿಜೆಪಿ ವರಿಷ್ಠರು, ಪಕ್ಷಕ್ಕೆ ಹಲವು ವರ್ಷಗಳಿಂದ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕಿರುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಕಳೆದ ತಿಂಗಳು ವಿಧಾನಸಭೆಯಿಂದ ರಾಜ್ಯಸಭೆಯ 3 ಸ್ಥಾನಗಳಿಗೆ ಬಿಜೆಪಿ ಅಚ್ಚರಿಯ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿತ್ತು. ಅದಾಗಿ ಕೆಲವೇ ದಿನಗಳಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲೂ ಕೂಡ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಭಾರಿ ಲಾಬಿ ಮಾಡುತ್ತಿದ್ದವರಿಗೆ ಶಾಕ್ ನೀಡಲಾಗಿತ್ತು. ಇನ್ನೇನಿದ್ದರೂ ಬಿಜೆಪಿಯಲ್ಲಿ ಲಾಬಿಗೆ ಸ್ಥಾನವಿಲ್ಲ, ಪಕ್ಷಕ್ಕಾಗಿ ದುಡಿದವರಿಗೆ ಸ್ಥಾನಮಾನ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ ರವಾನಿಸಿತ್ತು.


ನಾಮ ನಿರ್ದೇಶನಗೊಂಡವರ ಪಟ್ಟಿ
ಹೆಚ್.ವಿಶ್ವನಾಥ್-ಸಾಹಿತ್ಯ ಕ್ಷೇತ್ರ
ಸಿ.ಪಿ ಯೋಗೇಶ್ವರ್- ಸಿನಿಮಾ
ಭಾರತಿ ಶೆಟ್ಟಿ-ಸಮಾಜಸೇವೆ
ಡಾ.ತಳವಾರ್ ಸಾಬಣ್ಣ-ಶಿಕ್ಷಣ
ಶಾಂತಾರಾಂ ಬುದ್ನಸಿದ್ದಿ-ವಿಶಿಷ್ಟ ಸೇವೆ








