ಬೆಂಗಳೂರು : ಕೋವಿಡ್ ವಿಚಾರದಲ್ಲಿ ಯಾರೂ ಸಹ ರಾಜಕೀಯ ಮಾಡಬಾರದು. ಉದಾಹರಣೆಗೆ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ, ದೆಹಲಿ ಮುಖ್ಯಮಂತ್ರಿಗೆ ಕೊರೊನಾ ನಿಯಂತ್ರಣ ಮಾಡಲು ಸಂಪೂರ್ಣ ಸಹಕಾರ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ನೋಡಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಲಿಯಬೇಕು ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡುವುದನ್ನು ಬಿಡಬೇಕು. ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಅವರಿಗೆ ಟೀಕೆ ಮಾಡುವ ಹಕ್ಕು ಇದೆ. ಆದರೆ ಉದ್ದೇಶಪೂರ್ವಕವಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ದೂರಿದರು.
ಇದೇ ವೇಳೆ ಆಶಾ ಕಾರ್ಯಕರ್ತೆರ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಇದ್ದಾಗ, ವೇತನ ಹೆಚ್ಚಳಕ್ಕಾಗಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಬೀದಿಯಲ್ಲಿ ಹೋರಾಟ ಮಾಡಿದ್ದರು. ಆಗ ಯಾರಾದರೂ ಸಂಬಳ ಜಾಸ್ತಿ ಮಾಡಿದ್ರಾ ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳವಾಯಿತು. ಕೇಂದ್ರ ಸರ್ಕಾರ ಸಹ ಅವರಿಗೆ ವೇತನ ಹೆಚ್ಚು ಮಾಡಿತು ಎಂದು ಹೇಳಿದರು.
ಇನ್ನು ಕಾಂಗ್ರೆಸ್ ಆರೋಪಗಳ ಬಗ್ಗೆ ಮಾತನಾಡಿದ ಅವರು, ಕೋವಿಡ್ ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಚಿವರು ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಇನ್ನು ಬೇಕಾದರೆ ದಾಖಲೆ ಕೊಡೋಕೆ ತಯಾರಿದ್ದೇವೆ. ಎಳ್ಳಷ್ಟೂ ಕೂಡ ಇದರಲ್ಲಿ ಭ್ರಷ್ಟಾಚಾರ ಆಗಿಲ್ಲ. ಜನರನ್ನು ದಾರಿತಪ್ಪಿಸುವ ಹೇಳಿಕೆಗಳನ್ನು ವಿಪಕ್ಷ ನಾಯಕರು ನೀಡುತ್ತಿದ್ದಾರೆ ಎಂದು ದೂರಿದರು.








