ತಾಯಿಯೊಬ್ಬಳು ತನ್ನ ನಾಲ್ಕು ವರ್ಷದ ಮಗಳನ್ನು ಅಪಹರಿಸಲು ಯತ್ನಿಸುತ್ತಿದ್ದ ಇಬ್ಬರು ಪುರುಷರೊಂದಿಗೆ ಹೋರಾಡಿ ಮಗುವನ್ನು ರಕ್ಷಿಸಲು ಪ್ರಯತ್ನಿಸಿದ ಘಟನೆ ದೆಹಲಿಯ ಶಕರ್‌ಪುರ ಪ್ರದೇಶದಲ್ಲಿ ವರದಿಯಾಗಿದೆ. ಮಂಗಳವಾರ ನಡೆದ ಈ ಘಟನೆಯ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಬ್ಬ ವ್ಯಕ್ತಿಯು ಮನೆಯ ಒಳಗಿನಿಂದ ನಾಲ್ಕು ವರ್ಷದ ಮಗುವನ್ನು ಎತ್ತಿಕೊಳ್ಳುವುದನ್ನು ವೀಡಿಯೊ ತೋರಿಸುತ್ತದೆ. ಇನ್ನೊಬ್ಬ ವ್ಯಕ್ತಿ ತನ್ನ ಮೋಟಾರ್ ಬೈಕ್ ನಲ್ಲಿ ಅವರಿಗಾಗಿ ಕಾಯುತ್ತಿದ್ದು, ಅವರು ಬೈಕ್ ಹತ್ತಿದ ಕೂಡಲೇ ಪರಾರಿಯಾಗಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಆದರೆ ಮಗುವಿನ ತಾಯಿ ಎದೆಗುಂದದೆ ಆ ಪುರುಷರ ಮೇಲೆ ಹಲ್ಲೆ ನಡೆಸಿ ಮೋಟಾರ್ ಬೈಕ್ ಅನ್ನು ಗಟ್ಟಿಯಾಗಿ ಹಿಡಿದು ತಾಯಿಯ ಧೈರ್ಯ ಮತ್ತು ಮಾನಸಿಕ ಸ್ಥಿರತೆಯನ್ನು ತೋರಿಸಿದಾಳೆ. ಅವಳು ತನ್ನ ಒಂದು ಕೈಯಿಂದ ಮಗಳನ್ನು ಹಿಂದಕ್ಕೆ ಹಿಡಿದು ಮತ್ತೊಂದೆಡೆ ಮೋಟಾರ್ ಬೈಕ್ ಅನ್ನು ಹಿಡಿದಿಟ್ಟುಕೊಂಡು, ಅಪಹರಣಕಾರರು ತಪ್ಪಿಸಿಕೊಳ್ಳದಂತೆ ತಡೆಯುತ್ತಾಳೆ. ಆ ಹೊತ್ತಿಗೆ, ಅವಳು ತನ್ನ ಹಿಡಿತವನ್ನು ಕಳೆದುಕೊಂಡಿದ್ದು, ಅಪಹರಣಕಾರರು ಬೈಕಲ್ಲಿ ಪರಾರಿಯಾಗಲು ಪ್ರಯತ್ನಿಸಿದ ದೃಶ್ಯಗಳು ರಸ್ತೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಅಷ್ಟರಲ್ಲಿ ಒಬ್ಬ ವ್ಯಕ್ತಿಯು ತನ್ನ ದ್ವಿಚಕ್ರ ವಾಹನದೊಂದಿಗೆ ಅಪಹರಣಕಾರರ ಬೈಕನ್ನು ತಡೆಯಲು ಪ್ರಯತ್ನಿಸಿದ್ದು ಅವರಿಬ್ಬರನ್ನೂ ಹಿಡಿಯುವಲ್ಲಿ ಯಶಸ್ವಿಯಾದನು. ಆದರೆ ಅವರು ಬೈಕನ್ನು ಅಲ್ಲೇ ಬಿಟ್ಟು ಕಾಲ್ನಡಿಗೆಯಲ್ಲಿ ತಪ್ಪಿಸಿಕೊಂಡರು. ಬಳಿಕ ದೆಹಲಿ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರಲ್ಲಿ ಒಬ್ಬ ಮಗುವಿನ ತಂದೆಯ ತಮ್ಮ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ ಹಣದ ಅವಶ್ಯಕತೆ ಪೂರೈಸಲು ಮಗುವಿನ ಅಪಹರಣ ಕೃತ್ಯವನ್ನು ಮಗುವಿನ ಚಿಕ್ಕಪ್ಪನೇ ಯೋಜಿಸಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಮಂಗಳವಾರ ಅಪಹರಣಕ್ಕೆ ಯತ್ನಿಸಿದ ಬಗ್ಗೆ ದೂರು ಸ್ವೀಕರಿಸಿದ ಶಕರ್‌ಪುರ ಪೊಲೀಸರು, ಮಗುವಿನ ಅಪಹರಣಕಾರರನ್ನು ಪತ್ತೆಹಚ್ಚುವ ಮೂಲಕ ಪ್ರಕರಣವನ್ನು ಭೇದಿಸಿದ್ದಾರೆ.
ಬೈಕ್ ನಲ್ಲಿ ನಕಲಿ ನಂಬರ್ ಪ್ಲೇಟ್ ಇದ್ದರೂ, ಪೊಲೀಸರು ಮಾಲೀಕರನ್ನು ಚಾಸಿಸ್ ಸಂಖ್ಯೆ ಮತ್ತು ಎಂಜಿನ್ ಸಂಖ್ಯೆ ಮೂಲಕ ಗುರುತಿಸಿದ್ದಾರೆ. ಜಗತ್-ಪುರಿಯಲ್ಲಿ ಬೈಕ್ ಮಾಲೀಕ ಧೀರಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಗುವನ್ನು ಅಪಹರಿಸುವ ಯೋಜನೆಯನ್ನು ಆಕೆಯ ಚಿಕ್ಕಪ್ಪ ಉಪೇಂದರ್ ಬಿಟ್ಟೂ ಯೋಜಿಸಿದ್ದುದಾಗಿ ಧೀರಜ್ ಪೊಲೀಸರಿಗೆ ತಿಳಿಸಿದ್ದಾನೆ. ಒಂದು ಲಕ್ಷ ರೂ.ಗಳ ಭರವಸೆಯೊಂದಿಗೆ ಉಪೇಂದರ್ ಬಿಟ್ಟೂ ತನ್ನನ್ನು ಅಪರಾಧ ನಿರ್ವಹಿಸಲು ಸಹಾಯಕ್ಕಾಗಿ ತೊಡಗಿಸಿಕೊಂಡಿದ್ದ ಎಂದು ಧೀರಜ್ ಹೇಳಿದ್ದಾನೆ. ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಪೊಲೀಸರು ಉಪೇಂದರ್ ಬಿಟ್ಟೂ ವನ್ನೂ ಬಂಧಿಸಿದ್ದಾರೆ. ಉಪೇಂದರ್ ಬಿಟ್ಟೂ ತೀವ್ರ ಹಣದ ಕೊರತೆಯಲ್ಲಿದ್ದಾಗ ಅವನ ಸಹೋದರ ಆರ್ಥಿಕವಾಗಿ ಸದೃಡವಾಗಿದ್ದರು. ಆದ್ದರಿಂದ ಹಣದ ಸುಲಿಗೆಗಾಗಿ ತನ್ನ ಸಹೋದರನ ಮಗಳನ್ನು ಅಪಹರಿಸಲು ಯೋಜನೆ ಹಾಕಿದ್ದಾಗಿ ಉಪೇಂದರ್ ಬಿಟ್ಟೂ ಪೊಲೀಸರಿಗೆ ತಿಳಿಸಿದ್ದಾನೆ
ಬೈಕ್‌ನ ಹೊರತಾಗಿ, ನಾಲ್ಕು ಲೈವ್ ಕಾರ್ಟ್ರಿಜ್ಗಳೊಂದಿಗೆ ದೇಶ ನಿರ್ಮಿತ ಪಿಸ್ತೂಲ್ ಹೊಂದಿರುವ ಕಪ್ಪು ಬಣ್ಣದ ಚೀಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.








