ಇತ್ತೇಚೆಗೆ ದೇಶದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ರೆಡ್ ಮರ್ಕ್ಯೂರಿ ದಂಧೆ. ಹಳೇ ಟಿವಿ ರೇಡಿಯೋ ಕೊಡಿ, ಹೊಸ ಟಿವಿ ಕೊಡ್ತಿವಿ ಅಂತ ಅನೇಕರು ಅಕ್ರಮ ದಂಧೆಯನ್ನೇ ಶುರುಮಾಡಿಬಿಟ್ಟಿದ್ದರು. ಇದೀಗ ಅಂತಹದ್ದೇ ಒಂದು ಗ್ಯಾಂಗ್ ಅನ್ನು ಮಂಡ್ಯದ ಮಳವಳ್ಳಿ ಪೊಲೀಸರು ಬಂಧಿಸಿದ್ದಾರೆ. ರೆಡ್ ಮರ್ಕ್ಯೂರಿ ಟ್ಯೂಬ್ ಹೆಸರಲ್ಲಿ ವಂಚಿಸಿದ್ದ ಗ್ಯಾಂಗ್ ಒಂದನ್ನುಬಂಧಿಸಲಾಗಿದೆ. ವಜಾಗೊಂಡಿದ್ದ ಪೊಲೀಸ್ ಪೇದೆ ಸೇರಿ 8 ಮಂದಿ ಖತರ್ನಾಕ್ ಗಳ ಅರೆಸ್ಟ್ ಮಾಡಲಾಗಿದ್ದು, ಬಂಧಿತರಿಂದ 1 ಕಾರ್, 2 ಬೈಕ್, 10.36 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ.
ಈ ಖದೀಮರು ಜೂನ್ 22ರಂದು ಬೆಂಗಳೂರಿನ ಇಂಜಿನಿಯರ್ ಗೆ ರೆಡ್ ಮರ್ಕ್ಯೂರಿ ಟ್ಯೂಬ್ ಕೊಡೋದಾಗಿ ಮಳವಳ್ಳಿಗೆ ಕರೆಸಿದ್ದರು. ಈ ವೇಳೆ ಮಾತುಕತೆ ನೆಪದಲ್ಲಿ ಇಬ್ಬರು ಪೊಲೀಸರ ಸೋಗಿನಲ್ಲಿ ಬಂದು 22 ಲಕ್ಷ ವಂಚಿಸಿದ್ದರು. ಘಟನೆ ನಡೆದು 20 ದಿನಗಳ ಬಳಿಕ ವಂಚನೆಗೊಳಗಾದ ನೀತಿನ್ ರಾಜ್ ದೂರು ನೀಡಿದ್ದು, ಈ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿವೈಎಸ್ಪಿ ಪೃಥ್ವಿ, ಸಿಪಿಐ ಡಿ.ಪಿ.ಧನರಾಜ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆದಿದೆ.








