ಬೆಂಗಳೂರು : ಹೆಮ್ಮಾರಿ ಕೊರೊನಾ ವೈರಸ್ ನಿಂದಾಗಿ ಕನ್ನಡ ಚಿತ್ರರಂಗ ಕಂಗಾಲಾಗಿ ಹೋಗಿದೆ. ಸಿನಿಮಾವನ್ನೇ ನಂಬಿಕೊಂಡಿದ್ದ ಸಾವಿರಾರು ಕಾರ್ಮಿಕರ ಬದುಕು ಈಗ ಬೀದಿಗೆ ಬಂದಿದೆ. ಈ ಹಿನ್ನೆಲೆ ಸ್ಯಾಂಡಲ್‍ವುಡ್ ನ ಕಾರ್ಮಿಕರ ಬಗ್ಗೆ ಚರ್ಚಿಸಲು ಇಂದು ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಮನೆಯಲ್ಲಿ ಸಭೆ ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ಶಿವರಾಜ್ ಕುಮಾರ್ ನಿವಾಸದಲ್ಲಿ ಸಭೆ ನಡೆಯಲಿದ್ದು, ನಿರ್ಮಾಪಕರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘ ಸೇರಿದಂತೆ ಚಿತ್ರರಂಗದ ಹಲವರು ಭಾಗಿಯಾಗಲಿದ್ದಾರೆ.
ಮುಖ್ಯವಾಗಿ ಈ ಸಭೆಯಲ್ಲಿ ಕೊರೊನಾದಿಂದಾಗಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ಎಲ್ಲಾ ವರ್ಗಗಳಿಗೆ ಪ್ಯಾಕೇಜ್ ಘೋಷಿಸಿರುವ ಸರ್ಕಾರ ಚಿತ್ರರಂಗಕ್ಕೆ ಯಾವುದೇ ಪ್ಯಾಕೇಜ್ ಘೋಷಿಸಿಲ್ಲ. ಈ ಹಿನ್ನೆಲೆ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಂತರ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನಿಡುವ ಸಾಧ್ಯತೆ ಇದೆ.








