ಬೆಂಗಳೂರು : ಕೋವಿಡ್ 19 ಸಾಮಗ್ರಿಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ಸಿಗರಿಗೆ ಎಲ್ಲರೂ ಭ್ರಷ್ಟಾಚಾರಿಗಳಂತೆ ಕಾಣುತ್ತಾರೆ ಎಂದಿದ್ದಾರೆ. ಕಾಂಗ್ರೆಸ್ ಆರೋಪಗಳ ವಿಚಾರವಾಗಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಟೀಲ್, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಕಟೀಲ್ ಟ್ವೀಟ್ ನಲ್ಲಿ..
“ಕಾಮಾಲೆ ಕಣ್ಣಿನವರಿಗೆ ಜಗತ್ತೆಲ್ಲ ಹಳದಿಯಾಗಿ ಕಾಣುವಂತೆ ಕಾಂಗ್ರೆಸ್ಸಿಗರಿಗೆ ಎಲ್ಲರೂ ಭ್ರಷ್ಟಾಚಾರಿಗಳಂತೆ ಕಾಣುತ್ತಾರೆ. ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಜಾಮೀನು ಪಡೆದು ಹೊರಗಿದ್ದಾರೆ. ಅವರೆಲ್ಲ ಜಾಮೀನು ಪಡೆಯುವ ಸ್ಥಿತಿ ಯಾಕೆ ಬಂತು ಎಂಬುದನ್ನೂ ಜನರಿಗೆ ಹೇಳಲಿ” ಎಂದು ಸಿದ್ದರಾಮಯ್ಯ ಅವರನ್ನು ಕಟೀಲ್ ಕುಟುಕಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ, “ಕೊರೊನಾ ಸಂದರ್ಭದಲ್ಲಿ ಜನರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸವನ್ನು ನಾವು ಜನಪ್ರತಿನಿಧಿಗಳು ಮಾಡಬೇಕಿದೆ. ಅದು ಬಿಟ್ಟು ಕಾಂಗ್ರೆಸ್ನವರು ರಾಜಕಾರಣ ಮಾಡಲು ಹೊರಟಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ಆತಂಕಕ್ಕೀಡು ಮಾಡುವ ಕೆಲಸವನ್ನು ಮೊದಲು ನಿಲ್ಲಿಸಲಿ. ಎಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧದ ಸಮರ ಗೆಲ್ಲುವುದು ನಮ್ಮೆಲ್ಲರ ಗುರಿಯಾಗಲಿ” ಎಂದು ಸಲಹೆ ನೀಡಿದ್ದಾರೆ.
“ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಅನುಮಾನಗಳಿದ್ದರೆ ಬಗೆಹರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರೂ ಕಾಂಗ್ರೆಸ್ ನಾಯಕರು ಮತ್ತದೇ ಆರೋಪಗಳನ್ನು ಮಾಡಿದ್ದಾರೆ. ಕೊರೊನಾದಿಂದ ಹಾದಿಬೀದಿಯಲ್ಲಿ ಜನ ಸಾಯುತ್ತಿದ್ದಾರೆ ಎಂದು ಹಸಿ ಸುಳ್ಳು ಹೇಳಿ ಜನರಲ್ಲಿ ಅನಗತ್ಯ ಆತಂಕ ಸೃಷ್ಟಿಸುವ ಕೆಲಸದಲ್ಲಿ ನಿರತರಾಗಿದ್ದಾರೆ”.
“ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಸರಿಯಾದ ದಾಖಲೆ ಕೊಡಬೇಕಿತ್ತು. ಅವರು ಹೇಳಿರುವಷ್ಟು ಪ್ರಮಾಣದ ವೈದ್ಯಕೀಯ ಪರಿಕರಗಳ ಖರೀದಿಯೇ ಆಗಿಲ್ಲ. ಅಗತ್ಯಕ್ಕೆ ತಕ್ಕ ಖರೀದಿ ನಡೆಸಿದ್ದು, ತುರ್ತು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಸಿದ್ದರಾಮಯ್ಯ ಆರೋಪಕ್ಕೆ ಕಟೀಲ್ ಟಾಂಗ್ ನೀಡಿದ್ದಾರೆ.








