ಕೊರೊನಾ ಗೆದ್ದ ಶಾಸಕ ಡಾ| ಭರತ್ ಶೆಟ್ಟಿಯಿಂದ ಕೊರೊನಾ ಚಿಕಿತ್ಸೆ ಬಗ್ಗೆ ಮಾಹಿತಿ
ಮಂಗಳೂರು, ಜುಲೈ 24: ಕೊರೋನಾ ಸೋಂಕಿನ ವಿರುದ್ಧ ಗೆದ್ದು ಬಂದಿರುವ ಶಾಸಕ ಡಾl ವೈ. ಭರತ್ ಶೆಟ್ಟಿ ಅವರು ಕೊರೊನಾ ಸೋಂಕಿತರನ್ನು ಅಸ್ಪ್ರಶ್ಯರಂತೆ ಕಾಣದೆ ಸಮಾಜ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿದರೆ ಅವರು ಕೆಲವೇ ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಸರ್ಕಾರ, ಆರೋಗ್ಯ ಇಲಾಖೆ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಕೊರೊನಾ ಸೋಂಕಿನಿಂದ ದೂರವಿರಬಹುದು ಎಂದು ಹೇಳಿದ್ದಾರೆ.

ಪ್ರಸ್ತುತ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ, ನಿಯಮಗಳ ಪ್ರಕಾರ ಹೋಂ ಕ್ವಾರೆಂಟೈನ್ ನಲ್ಲಿರುವ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ| ವೈ ಭರತ್ ಶೆಟ್ಟಿ ಅವರು ಕೊರೊನಾ ಸೋಂಕಿನ ಚಿಕಿತ್ಸೆಯ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಶಾಸಕನಾಗಿ ಜನರ ಸಮಸ್ಯೆಗೆ ಸ್ಪಂದಿಸಬೇಕಾದದ್ದು ನನ್ನ ಕರ್ತವ್ಯವಾದ ಹಿನ್ನಲೆಯಲ್ಲಿ ನಾನು ನನ್ನ ಕ್ಷೇತ್ರದಲ್ಲಿ ನಿರಂತರ ಓಡಾಟ ನಡೆಸಿದ್ದೆ. ಆದರೆ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿದ್ದೆ. ಕಾರ್ಯನಿರ್ಮಿತ ಬೆಂಗಳೂರಿಗೆ ಹೋಗಿದ್ದ ನಾನು ಮನೆಗೆ ವಾಪಸಾಗಿದ್ದ ಮರು ದಿನ ಮೈ ಕೈ ನೋವು ಮತ್ತು ಸ್ವಲ್ಪ ಜ್ವರ ಕಾಣಿಸಿಕೊಂಡಿತು. ಬಹುಶಃ ಪ್ರಯಾಣದಿಂದ ಹೀಗೆ ಆಗಿರಬಹುದು ಎಂದು ಭಾವಿಸಿದ ನಾನು ಜ್ವರದ ಔಷಧ ಸೇವಿಸಿದೆ. ಆದರೆ ಮರುದಿನ ಜ್ವರ ಮತ್ತು ಮೈ ಕೈ ನೋವು ಇನ್ನಷ್ಟು ಜಾಸ್ತಿಯಾಯಿತು ಮತ್ತು ಅಘ್ರಾಣಿಸುವ ಶಕ್ತಿಯೂ ಕಡಿಮೆ ಆದಂತೆ ಎನಿಸಿತು. ಆಗ ನನಗೆ ಕೊರೊನಾ ಸೋಂಕಿನ ಬಗ್ಗೆ ಸಂದೇಹ ಉಂಟಾಗಿ ಪರೀಕ್ಷೆಗೆ ಒಳಪಟ್ಟೆ. ವರದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತು.ರಕ್ತದಲ್ಲಿ ಆಮ್ಲಜನಕ ಸರಿಯಾದ ಪ್ರಮಾಣದಲ್ಲಿಯೇ ಇತ್ತು ಮತ್ತು ಇತರ ಯಾವುದೇ ತೊಂದರೆಗಳು ಇರಲಿಲ್ಲ. ಆಸ್ಪತ್ರೆಗೆ ದಾಖಲಾದ 3 ದಿನದಲ್ಲಿ ಜ್ವರ ಕಡಿಮೆಯಾಯಿತು ಮತ್ತು ಬೇಗನೆ ಗುಣಮುಖನಾಗಿ ಮನೆಗೆ ಮರಳಿದೆ. ಕೊರೊನಾ ಸೋಂಕಿನ ನಿಯಮಗಳಿಗನುಸಾರವಾಗಿ ಈಗ ಹೋಂ ಕ್ವಾರೆಂಟೈನ್ ನಲ್ಲಿ ಇರುವುದಾಗಿ ಡಾ| ವೈ ಭರತ್ ಶೆಟ್ಟಿ ಹೇಳಿದ್ದಾರೆ.

ಕೊರೋನಾ ಬಗ್ಗೆ ಹಲವಾರು ತಪ್ಪು ಮಾಹಿತಿಗಳು ಹರಡಿರುವ ಹಿನ್ನಲೆಯಲ್ಲಿ ಜನರು ಭಯಭೀತರಾಗಿದ್ದಾರೆ. ಈ ಸೋಂಕಿನ ಬಗ್ಗೆ ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಕಡಿಮೆಯಿದ್ದು, ಶೇಕಡಾ 98 ರಷ್ಟು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.
ಕೊರೋನಾ ದೃಢಪಟ್ಟವರಿಗೆ ಜ್ವರವಿದ್ದರೆ, ಔಷಧ ಕೊಡುತ್ತಾರೆ, ಜತೆಗೆ ರೋಗ ನಿರೋಧಕ ಔಷಧ, ವಿಟಮಿನ್ ಮಾತ್ರೆಗಳನ್ನು ಕೊಡುತ್ತಾರೆ. ಉಸಿರಾಟದ ತೊಂದರೆ ಇದ್ದರೆ ಮಾತ್ರ ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡುತ್ತಾರೆ. ಜೊತೆಗೆ ರಕ್ತದೊತ್ತಡ, ರಕ್ತ ಪರೀಕ್ಷೆಗಳನ್ನು ಸಹ ಮಾಡಲಾಗುತ್ತದೆ. ಚಿಕಿತ್ಸೆ ನೀಡುವುದರ ಜೊತೆಗೆ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಕೊರೊನಾ ಪೀಡಿತರಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯವನ್ನೂ ಮಾಡುತ್ತಿದ್ದಾರೆ ಎಂದು ಭರತ್ ಶೆಟ್ಟಿ ತಿಳಿಸಿದ್ದಾರೆ.








