ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಪತ್ರಿಕೆ ಮತ್ತು ಸುದ್ದಿವಾಹಿನಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಪರಿಣಾಮವಾಗಿ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಕಳೆದ 20-30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಕೆಲವು ಪತ್ರಕರ್ತರು ಉದ್ಯೋಗ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಪತ್ರಕರ್ತರಿಗಾಗಿ ಆರ್ಥಿಕ ಪ್ಯಾಕೇಜ್ ನೀಡುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಆಗ್ರಹಿಸಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಸಂಕಷ್ಟಕ್ಕೊಳಗಾದ ಪತ್ರಕರ್ತರ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. ಉದ್ಯೋಗ ಕಳೆದುಕೊಂಡ ಹಲವು ಪತ್ರಕರ್ತರಿಗೆ ಪತ್ರಿಕೋದ್ಯಮ ಬಿಟ್ಟರೆ ಬೇರೆ ಗೊತ್ತಿಲ್ಲ. ಬೇರೆ ವ್ಯವಹಾರವೂ ಮಾಡಲಾಗದೆ ಆತಂಕದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅತಂತ್ರ ಪರಿಸ್ಥಿತಿಯಲ್ಲಿರುವ ಪತ್ರಕರ್ತರಿಗೆ ಸರ್ಕಾರ ಹಲವು ರೂಪದಲ್ಲಿ ನೆರವಾಗಲು ಸಾಧ್ಯವಿದೆ. ಅದಕ್ಕಾಗಿ ಕೆಲ ಹಕ್ಕೋತ್ತಾಯಗಳನ್ನು ಮಂಡಿಸಿದ್ದಾರೆ.
* ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸಬೇಕು
* ಕಾರ್ಮಿಕರಿಗೆ ನೀಡಿದಂತೆ ಸಂಕಷ್ಟದಲ್ಲಿರುವ ಪರ್ತಕರ್ತರೆಲ್ಲರಿಗೂ ಆರ್ಥಿಕ ಪ್ಯಾಕೇಜ್ ನೀಡಬೇಕು
* ರಾಜ್ಯ ಸರ್ಕಾರದ ವಿವಿಧ ನಿಗಮ-ಮಂಡಳಿಗಳಲ್ಲಿ ಪಿಆರ್‍ಒಗಳಾಗಿ ನೇಮಕ ಮಾಡಬೇಕು
* ವಿವಿಧ ಇಲಾಖೆ ಮತ್ತು ವಾರ್ತಾ ಇಲಾಖೆಗಳು ಸಿದ್ಧಪಡಿಸುವ ಸಾಕ್ಷ್ಯ ಚಿತ್ರಗಳ ತಯಾರಿಕೆ ಅವಕಾಶಗಳನ್ನು ಇಂತಹ ಪತ್ರಕರ್ತರಿಗೆ ನೀಡಲು ಸೂಚನೆ ನೀಡಬೇಕು.
* ಸರ್ಕಾರದ ವಿವಿಧ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವುದು.
* ಉಚಿತ ಆರೋಗ್ಯ ಕಾರ್ಡ್, ಉಚಿತ ಬಸ್ ಪಾಸ್ ನೀಡಬೇಕು
* ಆರ್ಥಿಕವಾಗಿ ಬಳಲುತ್ತಿರುವ ಪತ್ರಕರ್ತರ ಸಹಾಯಕ್ಕೆ ಸಾಲ ಸೌಲಭ್ಯ ನೀಡಬೇಕು ಎಂದು ಶಿವಾನಂದ ತಗಡೂರು ನೀಡಿದ ಮನವಿ ಪತ್ರದಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಪತ್ರಕರ್ತರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಿವಾನಂದ ತಗಡೂರು ತಿಳಿಸಿದ್ದಾರೆ.








