ಗಾಲ್ಫ್ ಅಂಗಣದಲ್ಲಿ ಮಿಂಚು ಹರಿಸುತ್ತಿರುವ ಏಳರ ಹರೆಯದ ಬಾಲೆ ಒಜಸ್ವಿನಿ..!
ಈ ಬಾಲೆಗೆ ಕೇವಲ ಏಳರ ಹರೆಯ. ಆದ್ರೆ ಈಕೆ ಮಾಡಿರುವ ಸಾಧನೆಯನ್ನು ನೋಡಿದಾಗ ನಂಬಲು ಸಹ ಸಾಧ್ಯವಿಲ್ಲ. ಆದ್ರೂ ನಂಬಲೇ ಬೇಕು. ಯಾಕಂದ್ರೆ ಆಕೆಯ ಸಾಧನೆಗೆ ಪಕ್ಕ ಪ್ರೂಫ್ ಇದೆ. ವೃತ್ತಿಪರತೆಯೂ ಇದೆ. ಆಕೆ ಬೆಳೆದಿರುವ ರೀತಿ, ಬೆಳೆಯುತ್ತಿರುವ ಪರಿಯನ್ನು ಗಮನಿಸಿದಾಗ ಆಕೆಯಲ್ಲೊಂದು ಅದ್ಭುತವಾದ ಪ್ರತಿಭೆ ಇದೆ. ವಿಶ್ವ ಮಟ್ಟದಲ್ಲೇ ಆಕೆ ಭಾರತದ ಹೆಸರನ್ನು ರಾರಾಜಿಸುತ್ತಾಳೆ ಅಂತ ಅನ್ನಿಸುತ್ತಿದೆ.
ಹೌದು, ಈಕೆಯ ಹೆಸರು ಒಜಸ್ವಿನಿ ಸರಸ್ವಾತ್. ಈಕೆ ಆಡುತ್ತಿರುವ ಕ್ರೀಡೆ ಗಾಲ್ಫ್. ತನ್ನ ಮೂರರ ಹರೆಯದಲ್ಲೇ ಗಾಲ್ಫ್ ಸ್ಟಿಕ್ ಹಿಡಿದು ಮೈದಾನಕ್ಕಿಳಿದಿದ್ದಾಳೆ. ಚಂಡಿಗಢ ಗಾಲ್ಫ್ ಕ್ಲಬ್‍ನ ಸದಸ್ಯೆಯಾಗಿರುವ ಒಜಸ್ವಿನಿ, ಆರಂಭದಲ್ಲಿ ಮಕ್ಕಳಾಟವಾಡುತ್ತಿದ್ದಾಳೆ ಎಂದುಕೊಂಡಿದ್ದರು. ಆದ್ರೆ ಆಕೆ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಳು. ಅಂದ ಹಾಗೇ ಈಕೆ ಅರ್ಜುನ್ ಪ್ರಶಸ್ತಿ ವಿಜೇತ ಹರ್ಮಿತ್ ಕಾಹ್ಲನ್ ಅವರ ಶಿಷ್ಯೆ. ಹರ್ಮಿತ್ ಗರಡಿಯಲ್ಲಿ ಪಳಗಿದ್ದ ಈ ಬಾಲೆ ನೋಡ ನೋಡುತ್ತಲೇ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ಜ್ಯೂನಿಯರ್ ವಿಭಾಗದಲ್ಲಿ ಭಾರತದಲ್ಲಿ ಮಾತ್ರವಲ್ಲ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲೂ ಪ್ರಶಸ್ತಿ ಗೆದ್ದುಕೊಂಡಿದ್ದಾಳೆ.
ಭಾರತದಲ್ಲಿ ಒಜಸ್ವಿನಿ ಅವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾಳೆ. ಕೆಟಗರಿ -7ರಲ್ಲಿ ಒಜಸ್ವಿನಿ ನಂಬರ್ ವನ್ ಸ್ಥಾನದಲ್ಲಿದ್ದಾಳೆ. ಅಲ್ಲದೆ 2019ರಲ್ಲಿ ಅಲ್ಬಾಟ್ರೊಸ್ ಜ್ಯೂನಿಯರ್ ಗಾಲ್ಪ್ ಮೆರಿಟ್ ಲಿಸ್ಟ್ ನಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾಳೆ.
ನಾನು ಮೂರರ ಹರೆಯದಲ್ಲೇ ಗಾಲ್ಫ್ ಆಡಲು ಶುರು ಮಾಡಿದ್ದೆ. ತುಂಬಾ ಜನ ಗಾಲ್ಫ್ ಆಡುವುದನ್ನು ನಾನು ನೋಡುತ್ತಿದ್ದೆ. ಆಗ ನನಗೆ ಅನ್ನಿಸಿದ್ದು ನಾನು ಅವರ ಜೊತೆ ಆಡಬೇಕು. ಬೇರೆ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು.
ನನ್ನ ಆಟ ನೋಡಿ ನನ್ನ ಶಿಕ್ಷಕರು ನನ್ನನ್ನು ಅಭಿನಂದಿಸಿದ್ದಾರೆ. ನಾನು ಶಾಲಾ ತಂಡದ ಟೆನಿಸ್ ತಂಡದಲ್ಲೂ ಇದ್ದೇನೆ ಎಂದು ಹೇಳ್ತಾಳೆ ಒಜಸ್ವಿನಿ.
ಸದ್ಯ ಕೊರೊನಾದಿಂದಾಗಿ ಶಾಲೆ ಆರಂಭವಾಗಿಲ್ಲ. ನಾನು ನನ್ನ ಆರರ ಹರೆಯದಲ್ಲಿ ಚಂಡಿಗಢದ ಗಾಲ್ಫ್ ಮೈದಾನದಲ್ಲಿ ಆಡುತ್ತಿದ್ದೆ. ಬೆಳಗ್ಗೆ 5ಗಂಟೆಯಿಂದ ಅಭ್ಯಾಸ ಶುರು ಮಾಡುತ್ತಿದ್ದೆ. ಆ ನಂತರ ನಾನು ಮೊಹಾಲಿಗೆ ಹೊಗುತ್ತಿದೆ. ಈಗ ಮೊಹಾಲಿ ಗಾಲ್ಫ್ ಮೈದಾನ ಓಪನ್ ಆಗಿದೆ.ಹಾಗಾಗಿ ನಾನು ಅಲ್ಲಿಯೇ ಅಭ್ಯಾಸ ಮಾಡುತ್ತಿದ್ದೇನೆ. ಮುಂದಿನ ಆಗಸ್ಟ್ ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‍ಷಿಪ್ ನಲ್ಲಿ ಪ್ರಶಸ್ತಿ ಗೆಲ್ಲುವುದನ್ನು ಎದುರು ನೋಡುತ್ತಿದ್ದೇನೆ ಎನ್ನುತ್ತಾಳೆ ಒಜಸ್ವಿನಿ.
2019ರಲ್ಲಿ ಒಜಸ್ವಿನಿ ಸುಮಾರು 40 ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದಿದ್ದಾಳೆ. ಕೆಲವೊಂದು ಟೂರ್ನಿಗಳಿಗೆ ಆಯೋಜಕರು ಆಕೆಗೆ ಆಹ್ವಾನವನ್ನೂ ನೀಡುತ್ತಿದ್ದಾರೆ. ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅನೇಕ ಜ್ಯೂನಿಯರ್ ಸ್ಪರ್ಧೆಗಳಲ್ಲಿ ಪ್ರಶಸ್ತಿಯ ಜೊತೆಗೆ ಮಿಂಚು ಕೂಡ ಹರಿಸಿದ್ದಾಳೆ. ಒಜಸ್ವಿನಿ ಉಜ್ಜಲ ಭವಿಷ್ಯಕ್ಕೆ ಶುಭ ಹಾರೈಕೆಗಳು. ಆಲ್ ದಿ ಬೆಸ್ಟ್..!








