ಭ್ರಷ್ಟಚಾರ ಆರೋಪ ಮಾಡಿದ ಪಕ್ಷದ ಮುಖಂಡರ ಹಿನ್ನಲೆ ಗಮನಿಸಿ – ನಳೀನ್ ಕುಮಾರ್ ಕಟೀಲ್
ಕಾಂಗ್ರೆಸ್ ಪಕ್ಷ ಬಿಎಸ್‍ವೈ ಸರ್ಕಾರದ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳಿಗೆ ಈಗಾಗಲೇ ಉತ್ತರ ನೀಡಲಾಗಿದೆ. ಪಂಚ ಸಚಿವರು ಸುದ್ದಿಗೋಷ್ಠಿ ನಡೆಸಿ ಪೂರ್ಣ ಪ್ರಮಾಣದ ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಎಸ್‍ವೈ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಭ್ರಷ್ಟಚಾರ ಆರೋಪ ಮಾಡಿರುವ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿರುವ ನಳೀನ್ ಕುಮಾರ್ ಕಟೀಲ್, ಈಗಾಗಲೇ ಸ್ವತಃ ಮುಖ್ಯಮಂತ್ರಿಗಳೇ ಕಾಂಗ್ರೆಸ್ ಅನ್ನು ಚರ್ಚೆಗೆ ಆಹ್ವಾನಿಸಿದ್ದಾರೆ. ಹಾಗೇ ಪಂಚ ಸಚಿವರು ಕಾಂಗ್ರೆಸ್ ನ ಎಲ್ಲಾ ಆರೋಪಗಳಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ ಎಂದು ಅವರು ಹೇಳಿದ್ರು.
ಇನ್ನು ಕಾಂಗ್ರೆಸ್ ಪಕ್ಷದ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಕಟೀಲ್, ಮೊದಲು ಭ್ರಷ್ಟಾಚಾರ ಮಾಡಿದವರ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು. ಯಾರು ಆರೋಪ ಮಾಡಿದ್ದಾರೆ ? ಅವರು ಏನೆಲ್ಲಾ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆರೋಪ ಮಾಡಿದ ಮುಖಂಡರು ಭ್ರಷ್ಟಚಾರಕ್ಕೆ ಸಿಲುಕಿ ಈಗ ಬೇಲ್ ನಲ್ಲಿದ್ದಾರೆ ಎಂದು ಲೇವಡಿ ಮಾಡಿದ್ರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಬೇಲ್ ನಲ್ಲಿದ್ದಾರೆ. ಮಾಜಿ ಅಧ್ಯಕ್ಷರು ಬೇಲ್ ನಲ್ಲಿದ್ದಾರೆ. ಹಾಗೇ ಕೆಪಿಸಿಸಿ ಹಾಲಿ ಅಧ್ಯಕ್ಷರೂ ಬೇಲ್ ನಲ್ಲಿದ್ದಾರೆ. ಅವರ ಕೇಸ್‍ಗಳ ಹಿನ್ನೆಲೆ ನೋಡಿದ್ರೆ ಅವರು ಏನು ಮಾಡಿದ್ದರು ಎಂಬುದು ಗೊತ್ತಾಗುತ್ತದೆ ಎಂದು ಕಿಡಿ ಕಾರಿದ್ರು.
ನಳೀನ್ ಕುಮಾರ್ ಇಷ್ಟು ದಿನ ಸುಮ್ಮನಿದ್ರು. ಯಾವುದೇ ಹೇಳಿಕೆಗಳನ್ನು ನೀಡದೇ ಮೌನಕ್ಕೆ ಶರಣಾಗಿದ್ದರು. ಕಾಂಗ್ರೆಸ್ ಎಷ್ಟೇ ಆರೋಪ ಮಾಡಿದ್ರೂ ಬಿಜೆಪಿ ರಾಜ್ಯಾಧ್ಯಕ್ಷರು ಯಾವುದೇ ಪ್ರತ್ಯುತ್ತರ ನೀಡಿರಲಿಲ್ಲ. ಇದೀಗ ಪಂಚ ಸಚಿವರ ಸುದ್ದಿಗೋಷ್ಠಿಯ ಬಳಿಕ ನಳೀನ್ ಕುಮಾರ್ ಕಾಂಗ್ರೆಸ್ ಪಕ್ಷದ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.








