ಬಳ್ಳಾರಿ : ಕೋವಿಡ್ ವಿಚಾರವಾಗಿ ಸಚಿವರಲ್ಲಿ ಸಮನ್ವಯತೆ ಇಲ್ವಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಕೊರೊನಾ ವಿಚಾರವಾಗಿ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರಲ್ಲೇ ಸಮನ್ವಯತೆ ಇಲ್ಲ ಎಂದು ವಿಪಕ್ಷಗಳೂ ಕೂಡ ಆರೋಪಿಸಿವೆ. ಇದೀಗ ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಶ್ರೀ ರಾಮುಲು ಅವರೇ ಸ್ಪಷ್ಟನೆ ನೀಡಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನನಗೆ ಯಾವುದೇ ರೀತಿಯ ಅಸಮಾಧಾನ ಕೂಡ ಇಲ್ಲ. ನಾವೆಲ್ಲಾ ಸಚಿವರು ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ ಎಂದರು.
ಇದೇ ವೇಳೆ ಸರ್ಕಾರದಲ್ಲಿ ಆರೋಗ್ಯ ಸಚಿವರನ್ನು ಸೈಡ್ ಲೈಡ್ ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ರಾಮುಲು ಪ್ರತಿಕ್ರಿಯಿಸಿ, ನನ್ನ ಇಲಾಖೆಯಲ್ಲಿ ಬೇರೆ ಸಚಿವರ ಅಥವಾ ಅಧಿಕಾರಿಗಳ ಹಸ್ತಕ್ಷೇಪ ಇಲ್ಲ. ನಾನು ಸಮರ್ಥನಾಗಿದ್ದೇನೆ. ನನಗೆ ಎರಡು ಬಾರಿ ಆರೋಗ್ಯ ಸಚಿವನಾಗಿರುವ ಅನುಭವ ಇದೆ. ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಸಚಿವರು ಕೆಲಸ ಮಾಡುತ್ತಿದ್ದೇವೆ. ಈ ಶ್ರೀರಾಮುಲುರನ್ನು ಸೈಡ್ ಲೈನ್ ಮಾಡಲು ಸಾಧ್ಯವಿಲ್ಲ. ಅದನ್ನು ಊಹೆ ಮಾಡಲು ಸಹ ಆಗೋದಿಲ್ಲ ಎಂದರು.








