ತುಳಸಿ ಗಿಡ ಕಳ್ಳರಿದ್ದಾರೆ.. ಎಚ್ಚರಿಕೆ !
ಹೊಸದಿಲ್ಲಿ, ಜುಲೈ 26: ನಾವು ಇಲ್ಲಿಯವರೆಗೆ ಹಣ, ಚಿನ್ನಾಭರಣ, ವಾಹನ ಇತ್ಯಾದಿಗಳು ಕಳ್ಳತನವಾಗುವ ಬಗ್ಗೆ ಕೇಳಿದ್ದೇವೆ. ಆದರೆ ಇದೀಗ ಮನೆಯ ಅಂಗಳದಲ್ಲಿನ ಗಿಡಮೂಲಿಕೆ ಕಳುವಾಗುತ್ತಿದೆ
ಹರ್ಯಾಣ ಮತ್ತು ಚಂಡಿಗಢಗಳಲ್ಲಿ ಇತ್ತೀಚೆಗೆ ವ್ಯಾಪಕವಾಗಿ ತುಳಸಿ ಗಿಡಗಳು ಕಳುವಾಗುತ್ತಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜನರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಗಿಡಮೂಲಿಕೆಗಳ ಮೊರೆ ಹೋಗುತ್ತಿದ್ದಾರೆ.

ಈ ಪೈಕಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ತುಳಸಿಗೆ ಹೆಚ್ಚಿನ ಜನರು ಮೊರೆ ಹೋಗುತ್ತಿದ್ದು, ನರ್ಸರಿಗಳಲ್ಲಿ ಕೂಡ ಭಾರಿ ಬೇಡಿಕೆ ಬಂದಿದೆಯಂತೆ. ಅಷ್ಟೇ ಅಲ್ಲ ಈ ಮೊದಲು ನೆರೆಹೊರೆಯವರ ಮನೆಯಿಂದ ತುಳಸಿ ಎಲೆಗಳನ್ನು ಕೇಳಿ ಪಡೆಯುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಮನೆ ಅಂಗಳದಲ್ಲಿದ್ದ ಗಿಡ ನಾಪತ್ತೆಯಾಗುತ್ತಿದೆಯಂತೆ. ಚಂಡಿಗಡ, ಫರಿದಾಬಾದ್, ಕರ್ನಾಲ್, ಹಿಸಾರ್ ಮತ್ತು ಗುರುಗ್ರಾಮಗಳಲ್ಲಿ ವ್ಯಾಪಕವಾಗಿ ತುಳಸಿ ಗಿಡ ಕಳ್ಳತನ ಆಗುತ್ತಿದೆಯಂತೆ. ಈ ಮೊದಲು ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದ ತುಳಸಿ ಗಿಡ ಇದೀಗ 250ರೂ ಗೆ ಮಾರಾಟವಾಗುತ್ತಿದೆಯಂತೆ.








